ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಬೆಳಗಾವಿ ತಹಶಿಲ್ದಾರ್ ಕಚೇರಿಯಲ್ಲಿ ಎಸ್‌ಡಿಎ ರುದ್ರೇಶ್ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.
‘ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ’ ಎಂಬ ಒಕ್ಕಣೆಯುಳ್ಳ ಅನಾಮಧೇಯ ಪತ್ರವೊಂದು ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ, ಪ್ರಕರಣದ ತನಿಖಾಧಿಕಾರಿ ಕಳಿಸಲಾಗಿದೆ.
ನವೆಂಬರ್ ಐದರಂದು ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ (ದ್ವಿತೀಯ ದರ್ಜೆ ಸಹಾಯಕ) ರುದ್ರೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಅವರು, ತನ್ನ ಸಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಪಿಎ ಸೋಮು, ತಹಶೀಲ್ದಾರ್ ಬಸವರಾಜ ನಾಗರಾಳ, ಸಹೊದ್ಯೋಗಿ ಅಶೋಕ ಕಬ್ಬಲಿಗೇರ್ ಕಾರಣ ಎಂದು ಹೆಸರು ಉಲ್ಲೇಖಿಸಿ ವಾಟ್ಸ್ಆ್ಯಪ್ ಗ್ರೂಪೊಂದರಲ್ಲಿ ಸಂದೇಶ ಕಳುಹಿಸಿದ್ದರು.
ಪ್ರಕರಣದ ತಹಶೀಲ್ದಾರ್ ಬಸವರಾಜ ನಾಗರಾಳ, ಅಶೋಕ ಕಬ್ಬಲಿಗೇರ್, ಹೆಬ್ಬಾಳ್ಳರ್ ಪಿಎ ಸೋಮು ಅವರು ನವೆಂಬರ್ 14ರಂದು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಪಡೆದಿದ್ದರು. ಇದಾದ ಕೆಲವೇ ದಿನಗಳಲ್ಲಿ ಈ ಪತ್ರ ಬಂದಿರುವುದು ಕುತೂಹಲ ಕೆರಳಿಸಿದೆ. ಅಂಚೆ ಮೂಲಕ ಅನಾಮಧೇಯ ವ್ಯಕ್ತಿಯ ಪತ್ರ ಬಂದಿದೆ.
ಪತ್ರದಲ್ಲಿ ‘ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ. ತಹಶಿಲ್ದಾರ್ ಆಪ್ತ ಡ್ರೈವರ್ ಯಲ್ಲಪ್ಪ ಬಡಸದ ಕೊಲೆಗೆ ಸೂತ್ರಧಾರ. ತಹಶೀಲ್ದಾರರ ಜೀಪ್ ಚೆಕ್ ಮಾಡಿದರೆ ಎಲ್ಲ ಸಿಗುತ್ತವೆ. ಅದು ಸೂಸೈಡ್ ಅಂತಿದ್ದಾರೆ. ಆದರೆ ಆತ್ಮಹತ್ಯೆ ಅಲ್ಲ. ಡ್ರೈವರ್ ಯಲ್ಲಪ್ಪನ ವಿಚಾರಣೆ ಮಾಡಿದರೆ ಕೊಲೆ ರಹಸ್ಯ ಹೊರಗೆ ಬರುತ್ತದೆ. ಯಲ್ಲಪ್ಪನ ಹೆಂಡತಿ ಅನೈತಿಕ ಸಂಬಂಧ ಇಟ್ಟುಕೊಂಡು ಅವನ ಎಲ್ಲ ದುಡ್ಡು ಹೊಡೆದಿರುತ್ತಾಳೆ. ಸತ್ತವನಿಗೆ ನ್ಯಾಯ ಸಿಗಬೇಕು ಕೇಸ್ ಮುಚ್ಚಿ ಹಾಕಬಾರದು’ ಎಂದು ಬರೆಯಲಾಗಿದೆ. ಅನಾಮಧೇಯ ಪತ್ರದಲ್ಲಿನ ಅಂಶಗಳು ಕಂಡು ಇದೀಗ ಪೊಲೀಸರು ದಂಗಾಗಿದ್ದಾರೆ.
ಪ್ರಕರಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಪಿಎ ಹೆಸರು ಕೇಳಿಬಂದ ಕಾರಣ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ತಿರುವು ಪಡೆದುಕೊಳ್ಳುವ ಲಕ್ಷಣವಿದೆ.
ಇದನ್ನು ಓದಿ : ಬಾಲವಿಕಾಸ ಮಕ್ಕಳಿಂದ ಶ್ರೀಸಾಯಿ ಲಕ್ಷಾರ್ಚನೆ