ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಅಂಕೋಲಾ(Ankola) : ತಾಲೂಕಿನ ತೆಂಕಣಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(GHPS) ಬುಧವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ(Fire) ಶಾಲೆಯ ಎರಡು ಕೊಠಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಘಟನೆಯಲ್ಲಿ ಅಂದಾಜು 50 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಮಧ್ಯರಾತ್ರಿ ನಡೆದ ದುರಂತ: ದಸರಾ ರಜೆ(Dussera Holiday) ಮುಗಿದು ಗುರುವಾರ ಬೆಳಿಗ್ಗೆಯಿಂದಲೇ ಶಾಲೆಗಳು ಪುನರಾರಂಭಗೊಳ್ಳಬೇಕಿದ್ದವು. ಆದರೆ, ಬುಧವಾರ ಮಧ್ಯರಾತ್ರಿ ಸುಮಾರು 1:30ರ ಸುಮಾರಿಗೆ ಶಾಲೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಒಂದು ಕೊಠಡಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದರೆ, ಮತ್ತೊಂದು ಕೊಠಡಿಗೆ ಭಾಗಶಃ ಹಾನಿಯಾಗಿದೆ.
ಸುಟ್ಟುಹೋದ ಬೆಲೆಬಾಳುವ ವಸ್ತುಗಳು:
ಅಪಘಾತದ ತೀವ್ರತೆಗೆ ಕೊಠಡಿಯಲ್ಲಿದ್ದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಸ್ಮಾರ್ಟ್ ಟಿವಿ(Smart Tv) ಬೆಂಕಿಗಾಹುತಿಯಾಗಿದೆ. ಇದರೊಂದಿಗೆ ಮಕ್ಕಳ ಆಟದ ಸಾಮಗ್ರಿಗಳು, ವ್ಯಾಯಾಮ ಸಲಕರಣೆಗಳು, ಬ್ಯಾಂಡ್ಸೆಟ್, ಪುಸ್ತಕಗಳು ಹಾಗೂ ಪಂಪ್ಸೆಟ್ ಸೇರಿದಂತೆ ಹಲವು ಅಗತ್ಯ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ:
ಮಧ್ಯರಾತ್ರಿ ಸಂಭವಿಸಿದ ಈ ಅಗ್ನಿ ಅವಘಡದ ಸುದ್ದಿ ತಿಳಿದ ಕೂಡಲೇ ಸಾರ್ವಜನಿಕರು ಹಾಗೂ ಅಗ್ನಿಶಾಮಕ ದಳದವರು(Fire Brigade) ಸ್ಥಳಕ್ಕೆ ಧಾವಿಸಿ ಹಪಹಪಿ ನಡೆಸಿ, ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ಹತೋಟಿಗೆ ತಂದರು.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ತಾ.ಪಂ. ಅಧಿಕಾರಿ ರಾಮು ಅಗ್ನಿ ಹಾಗೂ ಸ್ಥಳೀಯ ಮುಖಂಡರು ಸೇರಿದಂತೆ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ, ಹಾನಿಯ ವೀಕ್ಷಣೆ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಸರಾ ರಜೆ ಮುಗಿದು ಮಕ್ಕಳು ಶಾಲೆಗೆ ಮರಳುವ ದಿನವೇ ಈ ಅನಾಹುತ ಸಂಭವಿಸಿರುವುದು ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.