ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ(Bhatkal) : ಗ್ರಾಮ ಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸರ್ಕಾರ ಪರಿಷ್ಕರಿಸಿ ಜಾರಿಗೊಳಿಸಿರುವ ಕನಿಷ್ಠ ವೇತನ ಹಾಗೂ ತುಟ್ಟಿಭತ್ಯೆಯನ್ನು ಮತ್ತೆ ಕಡಿತಗೊಳಿಸಿ ಹಳೆಯ ವೇತನ ಪಾವತಿಸಲು ಮುಂದಾಗಿರುವ ಕ್ರಮಕ್ಕೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಗುರುವಾರದಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಬಿ. ಅವರಿಗೆ ಮನವಿ ಸಲ್ಲಿಸಿರುವ ಪಂಚಾಯತ ನೌಕರರು, ಸರ್ಕಾರದ ಆದೇಶದನ್ವಯ ಜೂನ್ 2026ರಿಂದ ಪಾವತಿಸಲಾಗುತ್ತಿದ್ದ ಪರಿಷ್ಕೃತ ವೇತನವನ್ನು ಅಕ್ಟೋಬರ್‌ನಿಂದ ಸ್ಥಗಿತಗೊಳಿಸಿ ಹಳೆಯ ವೇತನ ನೀಡುವ ನಿರ್ಧಾರವನ್ನು ಕೈಬಿಡಬೇಕು. ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನವನ್ನೇ ಮುಂದುವರಿಸಬೇಕು ಎಂದು ಸಂಘ ಆಗ್ರಹಿಸಿದರು.

ಸರ್ಕಾರ ರಾಜ್ಯಪತ್ರದ ಮೂಲಕ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಕನಿಷ್ಠ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಲರ್ಕ್, ಬಿಲ್ ಕಲೆಕ್ಟರ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟ‌ರ್, ಜವಾನ, ವಾಟರ್‌ಮನ್, ಡಾಟಾ ಎಂಟ್ರಿ ಆಪರೇಟರ್ ಹಾಗೂ ಸ್ವಚ್ಛತಾ ಸಿಬ್ಬಂದಿಗಳಿಗೆ ಜೂನ್‌ನಿಂದ ಪರಿಷ್ಕೃತ ವೇತನ ಮತ್ತು ತುಟ್ಟಿಭತ್ಯೆ ಪಾವತಿಸಲಾಗುತ್ತಿತ್ತು ಎಂದು ತಿಳಿಸಿದೆ.

ಆದರೆ, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಗಸ್ಟ್ 28ರ ಆದೇಶ ಹಾಗೂ ಸೆಪ್ಟೆಂಬರ್ 18ರಂದು ನ್ಯಾಯಾಲಯ ನೀಡಿರುವ ತಡೆಯಾಜ್ಞೆಯಿಂದಾಗಿ ವೇತನ ಪಾವತಿ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಭಟ್ಕಳ(Bhatkal) ತಾಲೂಕು ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಪರಿಷ್ಕೃತ ವೇತನ ಪಾವತಿಸದಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಲಾಗಿದೆ ಎನ್ನಲಾಗಿದ್ದು,ಅಕ್ಟೋಬರ್ ನಿಂದ  ಹಳೆಯ ವೇತನವನ್ನೇ ಪಾವತಿಸುವುದಾಗಿ ತಿಳಿಸಲಾಗುತ್ತಿದೆ ಎಂದು ಸಂಘ ದೂರಿದೆ.

ಗ್ರಾಮ ಪಂಚಾಯತ್(Grama Panchayat) ಸಿಬ್ಬಂದಿಗಳು ಜನನ -ಮರಣ ನೋಂದಣಿ, ತೆರಿಗೆ ಸಂಗ್ರಹ, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ಹಾಗೂ ಸರ್ಕಾರಿ ಯೋಜನೆಗಳ (Government Schemes) ಅನುಷ್ಠಾನ ಸೇರಿದಂತೆ ಗ್ರಾಮೀಣ ಆಡಳಿತದ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಕಡಿಮೆ ವೇತನದಲ್ಲಿಯೇ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಬೆಲೆ ಏರಿಕೆಯ ಈ ಸಂದರ್ಭದಲ್ಲಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ದೈನಂದಿನ ಅಗತ್ಯಗಳನ್ನು ಪೂರೈಸುವುದೇ ಕಷ್ಟವಾಗಿದೆ.

ಇಂತಹ ಸಂದರ್ಭದಲ್ಲಿ ಸರ್ಕಾರವೇ ಪರಿಷ್ಕರಿಸಿದ ವೇತನವನ್ನು ಮತ್ತೆ ಕಡಿತಗೊಳಿಸುವುದು ನೌಕರರ ಬದುಕಿಗೆ ಮತ್ತಷ್ಟು ಆರ್ಥಿಕ ಹೊರೆ ಉಂಟುಮಾಡಲಿದೆ. ನೌಕರರ ಶ್ರಮಕ್ಕೆ ತಕ್ಕ ವೇತನ ನೀಡಬೇಕಾದ ಸರ್ಕಾರವೇ ವೇತನ ಕಡಿತಕ್ಕೆ ಮುಂದಾಗುವುದು ಸರಿಯಲ್ಲ ಎಂಬುದು ಸಂಘದ ಅಭಿಪ್ರಾಯವಾಗಿದೆ.

ಸರ್ಕಾರದ ಆದೇಶ(Government Order) ಹಾಗೂ ನ್ಯಾಯಾಲಯದ ತಡೆಯಾಜ್ಞೆಯ ವ್ಯಾಪ್ತಿಯನ್ನು ಕಾನೂನುಬದ್ಧವಾಗಿ ಪರಿಶೀಲಿಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಕೇವಲ ಮೌಖಿಕ ಸೂಚನೆಯ ಆಧಾರದ ಮೇಲೆ ನೌಕರರ ವೇತನ ತಡೆಹಿಡಿಯಬಾರದು. ಪರಿಷ್ಕೃತ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆಯನ್ನು ಮುಂದುವರಿಸುವುದರ ಜತೆಗೆ ಬಾಕಿ ವೇತನವನ್ನೂ ಬಿಡುಗಡೆ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.

ತಾಲೂಕು ಪಂಚಾಯತ್ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ವೇತನ ಕಡಿತದ ಗೊಂದಲಕ್ಕೆ ತೆರೆ ಎಳೆದು ಗ್ರಾಮ ಪಂಚಾಯತ್ ನೌಕರರ ಹಿತ ಕಾಪಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೇಶ ನಾಯ್ಕ, ಉಪಾಧ್ಯಕ್ಷ ವಿನಾಯಕ ಆಚಾರ್ಯ, ಕಾರ್ಯದರ್ಶಿ ದಾಮೋದರ ನಾಯ್ಕ, ಸದಸ್ಯರಾದ ಮಾರುತಿ ನಾಯ್ಕ, ಶ್ರೀನಿವಾಸ ನಾಯ್ಕ, ವಿನಾಯಕ ಹೆಬಳೆ, ಶ್ರೀಧರ ನಾಯ್ಕ, ಜ್ಯೋತಿ ನಾಯ್ಕ, ದೇವಿ ದೇವಡಿಗ ಸೇರಿದಂತೆ ಹಲವು ನೌಕರರು ಉಪಸ್ಥಿತರಿದ್ದರು.