ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಗೋಕರ್ಣ(Gokarn): ಇಲ್ಲಿನ ದುಬ್ಬನಶಶಿ ಕಡಲತೀರದಲ್ಲಿ ಈಜಲು ಹೋಗಿ ಸಮುದ್ರದ ಪಾಲಾಗಿದ್ದ ಬೆಂಗಳೂರಿನ(Banglore) ಖಾಸಗಿ ಕಂಪನಿಯ ಉದ್ಯೋಗಿಗಳಲ್ಲಿ, ನಾಪತ್ತೆಯಾಗಿದ್ದ ಕೊನೆಯ ಯುವಕನ ಮೃತದೇಹವೂ ಸೋಮವಾರ ಪತ್ತೆಯಾಗಿದೆ. ಇದರೊಂದಿಗೆ ಈ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

​ಉತ್ತರ ಕನ್ನಡ(Uttarkannada) ಜಿಲ್ಲೆಯ ಕುಮಟಾ (Kumta) ತಾಲೂಕಿನ ಗೋಕರ್ಣದ ದುಬ್ಬನಶಶಿ ಬೀಚ್‌ನಲ್ಲಿ ಈ ದುರಂತ ಸಂಭವಿಸಿತ್ತು.

ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ‘ಅಲೋರಿಯಾ ಇಕೋಸ್ಪೇಸ್’ ಕಂಪನಿಯ 16 ಜನರ ನೌಕರರ ತಂಡವೊಂದು ಶನಿವಾರ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿತ್ತು. ಸಮುದ್ರದಲ್ಲಿ ಈಜಾಡುತ್ತಿದ್ದಾಗ ಏಕಾಏಕಿ ಎದ್ದ ಬೃಹತ್ ಅಲೆಗೆ ಸಿಲುಕಿ ಐವರು ಉದ್ಯೋಗಿಗಳು ನೀರಿನಲ್ಲಿ ಕೊಚ್ಚಿಹೋಗಿದ್ದರು.

​ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಮೀನುಗಾರರು ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಶೋಭಾದಾಸ್ (22), ಮಹಮ್ಮದ್ ಅಕ್ರಮ್ ಹಾಗೂ ವಿಶ್ವೇಶ್ (24) ಎಂದು ಗುರುತಿಸಲಾಗಿದೆ.

​ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದ ಬೆಂಗಳೂರಿನ ಬಾಬುಸಾಪಾಳ್ಯದ ವಿಶ್ವೇಶ್ (24) ಅವರ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗಿದ್ದು, ಇದೀಗ ಅವರ ಶವವೂ ಪತ್ತೆಯಾಗಿದೆ.

​ಘಟನೆಗೆ ಸಂಬಂಧಿಸಿದಂತೆ ಗೋಕರ್ಣ(Gokarn) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.