ಅಂಕೋಲಾ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲಾಡಳಿತ ಪದವಿ ಪೂರ್ವ ಹಂತದವರೆಗಿನ ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಣೆ ಮಾಡುತ್ತಿದೆ. ಆದರೆ ಪದವಿ ವಿದ್ಯಾರ್ಥಿಗಳಿಗೆ ಯಾಕೆ ರಜೆ ಇಲ್ಲ ಎಂಬ ಪ್ರಶ್ನೆ ಎದ್ದಿದೆ.
ರಜೆಯಿಂದಾಗಿ ಶೈಕ್ಷಣಿಕ ಅವಧಿ ಮತ್ತು ಪರೀಕ್ಷೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದಾಗ್ಯೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗೆ ರಜೆ ನೀಡುವುದು ಸ್ವಾಗತಾರ್ಹ. ಆದರೆ ಪದವಿ ಪೂರ್ವ ಹಂತದ ನಂತರದ ವಿದ್ಯಾರ್ಥಿಗಳಿಗೆ ಮಾತ್ರ ರಜೆ ಇಲ್ಲವಾಗಿದೆ.
ಜಿಲ್ಲೆಯ ನರ್ಸಿಂಗ್ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಪ್ರಯಾಸ ಪಡುತ್ತಿದ್ದಾರೆ. ಕರ್ನಾಟಕ ವಿಶ್ವ ವಿದ್ಯಾಲಯದ ಅಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಬೇಕೆಂದು ಪದವಿ ವಿದ್ಯಾರ್ಥಿಗಳು ಒತ್ತಾಯ ಮಾಡುತ್ತಿದ್ದಾರೆ. ವಿಪರೀತ ಮಳೆ ಗಾಳಿಯಿದ್ದು ಪ್ರವಾಹದ ಭೀತಿಯೂ ಇದೆ. ಆದಾಗ್ಯೂ ಧಾರವಾಡ ಜಿಲ್ಲೆಯ ಕೇಂದ್ರ ಸ್ಥಾನ ಹೊಂದಿರುವ ಕರ್ನಾಟಕ ವಿಶ್ವ ವಿದ್ಯಾಲಯದ ಆಡಳಿತ ಅಧಿಕಾರಿಗಳಿಗೆ ಇಲ್ಲಿನ ಪರಿಸ್ಥಿತಿ ಅರಿವಾಗುತ್ತಿಲ್ಲ. ಪದವಿ ವಿದ್ಯಾರ್ಥಿಗಳು ಎದುರಿಸುವ ತೊಂದರೆಯ ಬಗ್ಗೆ ಸಂಬಂಧಪಟ್ಟವರಿಗೆ ಗೊತ್ತಿಲ್ಲ
ಜಿಲ್ಲೆಯ ಪದವಿ ಕಾಲೇಜುಗಳ ಪ್ರಾಚಾರ್ಯರು ಇಲ್ಲಿನ ಮಳೆಯ ಸ್ಥಿತಿಗತಿಯ ಬಗ್ಗೆ ಅಧಿಕಾರಿಗೆ ಮಾಹಿತಿ ನೀಡಿ ಭಾರೀ ಪ್ರಮಾಣದ ಮಳೆಯಾದಾಗ ವಿದ್ಯಾರ್ಥಿಗಳಿಗೆ ರಜೆ ನೀಡಬೇಕು ಎಂದು ವಿದ್ಯಾರ್ಥಿಗಳ ಪಾಲಕರು ಒತ್ತಾಯಿಸುತ್ತಿದ್ದಾರೆ.
ಪದವಿ ವಿದ್ಯಾರ್ಥಿಗಳಿಗೆ ರಜೆ ನೀಡದ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ನಡೆದಿದೆ. ವಾಟರ್ ಪ್ರೂಫ್ ವಿದ್ಯಾರ್ಥಿಗಳೇ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.