ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಬೆಂಗಳೂರು(Banglore) : ಕಳೆದ ಎರಡೂವರೆ ವರ್ಷದಿಂದ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ  ಕರ್ತವ್ಯ ನಿರ್ವಹಿಸಿದ್ದ  ಕೆ.ಲಕ್ಷ್ಮಿಪ್ರಿಯಾ ಅವರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.

 ಅವರ ಸ್ಥಾನಕ್ಕೆ ಬೆಂಗಳೂರಿನ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇಲಾಖೆಯ ಇ-ಆಡಳಿತ ವಿಭಾಗದ ನಿರ್ದೇಶಕರಾಗಿದ್ದ  ಬೋಯರ್ ಹರ್ಷಲ್ ನಾರಾಯಣರಾವ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಉತ್ತರ ಕನ್ನಡ ಜಿಲ್ಲೆಗೆ 2024ರ ಜೂನ್ ನಲ್ಲಿ ಕೆ . ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿಯಾಗಿ  ಬರುತ್ತಿದ್ದಂತೆ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದ ಪರಿಣಾಮಗಳನ್ನ ಎದುರಿಸಿದ್ದರು. ಶಿರೂರು ಗುಡ್ಡ ಕುಸಿತ,  ಕಾಳಿ ಸೇತುವೆ ಕುಸಿತ, ಇನ್ನಿತರ ದೊಡ್ಡ ಘಟನೆಗಳು ಎದುರಾಗಿದ್ದು ಜಿಲ್ಲಾಧಿಕಾರಿ ಕೆ.ಲಕ್ಷಿಪ್ರಿಯಾ ಈ ಸವಾಲುಗಳನ್ನ ಸಮರ್ಥವಾಗಿ ಎದುರಿಸಿದ್ದರು.

 ಜಿಲ್ಲೆಯಲ್ಲಿ ನಡೆದ ಬಂದರು ಯೋಜನೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳ ವಿರುದ್ಧ ಅನೇಕ ಹೋರಾಟಗಳು ದೊಡ್ಡ ಮಟ್ಟದಲ್ಲಿ ನಡೆದಿದ್ದು, ಪರಿಸರ ಅಹವಾಲು ಸಭೆ ನಡೆಸುವ ಮೂಲಕ ಪರಿಸ್ಥಿತಿ  ನಿಭಾಯಿಸುವಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಯಶಸ್ವಿಯಾಗಿದ್ದರು. ಅನೇಕ ದೊಡ್ಡ ದುರಂತಗಳು ಸಂಭವಿಸಿದ ವೇಳೆಯಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ಸರಳತೆಯ ಮೂಲಕವೇ ಲಕ್ಷ್ಮಿ ಪ್ರಿಯಾ ಗಮನ ಸೆಳೆದವರು.

ಕಳೆದ ನಾಲ್ಕೈದು ತಿಂಗಳಿಂದ ಎಸ್.ಐ.ಆರ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹೆಮ್ಮೆ ಲಕ್ಷ್ಮೀಪ್ರಿಯಾ ಅವರದ್ದಾಗಿದೆ.

ಎರಡು ವರ್ಷ ಪೂರೈಸಿದ್ದರಿಂದ ಅವರನ್ನ ಸರ್ಕಾರ  ವರ್ಗಾಯಿಸಿ ಬೋಯರ್ ಹರ್ಷಲ್ ನಾರಾಯಣರಾಮ್ ಅವರನ್ನ ನೇಮಕ ಮಾಡಲಾಗಿದೆ.  ಮಹಾರಾಷ್ಟ್ರ ಮೂಲದವರಾಗಿರುವ ಹರ್ಷಲ್ ನಾರಾಯಣರಾವ್ 2016ರ  ಬ್ಯಾಚಿನ ಐ.ಎ.ಎಸ್ ಅಧಿಕಾರಿಯಾಗಿದ್ದಾರೆ.