ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar) : ಪ್ರೋ ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಉತ್ತರ ಕನ್ನಡ(Uttarkannada) ಜಿಲ್ಲೆಯ ಕಾರವಾರದಲ್ಲಿ(Karwar) ಬೃಹತ್ ಪ್ರತಿಭಟನೆ ನಡೆಸಿದರು.
ಸಮಿತಿ ರಾಜ್ಯಾದ್ಯಂತ ಕರೆ ನೀಡಿದ ಹಿನ್ನಲೆಯಲ್ಲಿ ಕಾರವಾರದ ಮಿತ್ರ ಸಮಾಜ ಮೈದಾನದಲ್ಲಿ ಸೇರಿದ ಕದಸಂಸ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಗ್ರೀನ್ ಸ್ಟ್ರೀಟ್(Greenstreet) ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್(Dr Baba Saheb Ambedkar) ಪರ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲ ಕಾಲ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸದಸ್ಯ ಶಿವಬಸಪ್ಪ, ಪರಿಶಿಷ್ಟ ಜಾತಿ(Scheduled Caste) ಹಾಗೂ ಪರಿಶಿಷ್ಟ ಪಂಗಡಗಳ(Scheduled Tribes) ಮೀಸಲಾತಿ ಶೇಕಡಾ 6ಕ್ಕೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಂವಿಧಾನ 9ನೇ ಶೆಡ್ಯುಲ್ ಗೆ ತಿದ್ದುಪಡಿ ತಂದು ಕಾನೂನು ತಿದ್ದುಪಡಿ ತರಬೇಕು. ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯಲ್ಲಿ ಮೊಗೇರ ಜನಾಂಗ(Moger Community’s) ಬಿ ಗುಂಪಿನಲ್ಲಿ ಸೇರಿಸಲಾಗಿದೆ. ಕರ್ನಾಟಕ ಗೆಜೆಟ್ ನೋಟಿಫಿಕೇಶನಲ್ಲಿ ಉಲ್ಲೇಖವಾಗಿದೆ. ದಲಿತ ಸಂಘಟನೆಗಳೆಂದು(Dalita Sangha) ಹೇಳಿಕೊಂಡ ಕೆಲವರು ಉತ್ತರಕನ್ನಡ ಜಿಲ್ಲೆಯ ಮೊಗೇರರು ಪರಿಶಿಷ್ಟ ಜಾತಿಯವರು ಅಲ್ಲ ಎಂದು ಹೇಳಿ ವಂಚಿಸುತ್ತಿದ್ದಾರೆ. ಇದು ಖಂಡನೀಯ ಎಂದರು.
ಸಮಿತಿ ಜಿಲ್ಲಾ ಸಂಚಾಲಕ ಗಣೇಶ ಮೊಗೇರ ಮಾತನಾಡಿ, 1977ರಿಂದ 2008ರವರೆಗೆ ಮೊಗೇರರಿಗೆ ಎಸ್ಸಿ ಪ್ರಮಾಣ ಪತ್ರ ನೀಡಿದ್ದು, ಬಳಿಕ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಲ್ಲದೇ ತಕ್ಷಣವೇ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಪ್ರೋ ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ದಲಿತ ಹೋರಾಟಗಾರ ಕರಿಯಪ್ಪ, ಶಿವಮೊಗ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಪ್ಪ, ಸದಸ್ಯ ರಾಜಶೇಖರ್, ಜಿಲ್ಲಾ ಸಂಘದ ಗುರುದಾಸ ಮೊಗೇರ, ಯೊಗೇಶ ಮೊಗೇರ, ತಿಮ್ಮಪ್ಪ ಮೊಗೇರ, ಎಫ್ ಕೆ ಮೊಗೇರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮೊಗೇರ ಸಮುದಾಯದ ನಾಗರಿಕರು ಭಾಗವಹಿಸಿದ್ದರು.