ಕುಮಟಾ : ಶಾಸಕ ದಿನಕರ ಶೆಟ್ಟಿ ಅವರ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಫೋಟ ವಾದ ಘಟನೆ ಇಲ್ಲಿನ ಕೊಪ್ಪಳಕರವಾಡಿಯಲ್ಲಿ ಸಂಭವಿಸಿದೆ.
ಮಧುಕರ ಶೆಟ್ಟಿ ಕುಟುಂಬದವರು ಮನೆಯಿಂದ ಹೊರಗೆ ಹೋದ ವೇಳೆ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿತ್ತು. ಮನೆಗೆ ಬಂದು ಬಾಗಿಲು ತೆಗೆದಾಗ ಸಿಲಿಂಡರ್ ಸ್ಪೋಟಗೊಂಡಿದೆ. ಪರಿಣಾಮವಾಗಿ ಮಧುಕರ ಶೆಟ್ಟಿ ಪತ್ನಿ ಲತಾ ಶೆಟ್ಟಿ ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಅವರಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಸ್ಪೋಟದ ಭಯಾನಕ ಶಬ್ಧಕ್ಕೆ ಸ್ಥಳೀಯರು ಕಂಗಾಲಾಗಿದ್ದು ಸ್ಥಳಕ್ಕೆ ಓಡಿ ಬಂದಿದ್ದಾರೆ. ದುರ್ಘಟನೆಯಲ್ಲಿ ಮನೆಯ ಒಳಭಾಗ ಹೊತ್ತಿ ಉರಿದಿದ್ದು, ಪೀಠೋಪಕರಣ, ಟಿ.ವಿ ಸೇರಿ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿ ಭಸ್ಮವಾಗಿದೆ. ಸ್ಥಳಕ್ಕೆ ಕುಮಟಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ಆರಿಸಿದ್ದಾರೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.