ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ(Bhatkal): ತಾಲೂಕಿನ ಮುಟ್ಟಳ್ಳಿ ಬೈಪಾಸ್(Muttalli Bipass) ಸೇತುವೆಯ ಸಮೀಪ ಕಾರು ಹಾಗೂ ಪಿಕಪ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಎರಡೂ ವಾಹನಗಳಲ್ಲಿದ್ದ ಏಳು ಜನರು ಗಾಯಗೊಂಡಿದ್ದಾರೆ.

ಕುಂದಾಪುರ ಮಾರ್ಗದಿಂದ ಭಟ್ಕಳದ(Kundapur to Bhatkal) ಕಡೆಗೆ ಬರುತ್ತಿದ್ದ ಹ್ಯುಂಡೈ ವೆನ್ಯೂ ಕಾರನ್ನು ಕೇರಳ ಮೂಲದ(Keral Native) ಮಿಸ್ರಿಯಾ ಚಲಾಯಿಸುತ್ತಿದ್ದರು. ಮುಟ್ಟಳ್ಳಿ ಬೈಪಾಸ್ ಸೇತುವೆ ಹತ್ತಿರ ಬರುತ್ತಿದ್ದಂತೆ ಕಾರು ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಎದುರು ದಿಕ್ಕಿನಿಂದ ಬರುತ್ತಿದ್ದ ಮಹೀಂದ್ರಾ ಬೊಲೆರೊ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಪಿಕಪ್ ಚಾಲಕ, ಶಿರಾಲಿ ಶಾರದಾಹೊಳೆ ನಿವಾಸಿ ರವೀಂದ್ರ ಮಂಜಪ್ಪ ನಾಯ್ಕ (43) ಹಾಗೂ ಅವರೊಂದಿಗಿದ್ದ ಸುಬ್ರಾಯ ಕೃಷ್ಣ ಮೊಗೇರ ಗಾಯಗೊಂಡಿದ್ದಾರೆ. ಇತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೇರಳ ಮೂಲದ ಫಾತಿಮಾ ಮರ್ವಾ, ಫಾತಿಮಾ ಎ.ಎ., ಅಫ್ರಾ, ಆಫ್ರಿದ್ ಮತ್ತು ರಿಮ್ಸಾ ಅವರಿಗೂ ಗಾಯಗಳಾಗಿವೆ.

​ಏರ್‌ಬ್ಯಾಗ್‌ನಿಂದ ತಪ್ಪಿದ ಭಾರಿ ಅನಾಹುತ: ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ, ಸಕಾಲದಲ್ಲಿ ಕಾರಿನ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

​ಅಪಘಾತದ ಬೆನ್ನಲ್ಲೇ ಗಾಯಾಳುಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ತೀವ್ರವಾಗಿ ಗಾಯಗೊಂಡ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಆಸ್ಪತ್ರೆಗೆ ರವಾನಿಸಲಾಗಿದೆ.

​ಪಿಕಪ್ ಚಾಲಕ ರವೀಂದ್ರ ಮಂಜಪ್ಪ ನಾಯ್ಕ ನೀಡಿದ ದೂರಿನ ಆಧಾರದ ಮೇಲೆ ಭಟ್ಕಳ(Bhatkal) ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.