ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ​ದಾಂಡೇಲಿ(Dandeli): ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಪ್ರಸಿದ್ಧ ವೆಸ್ಟ್ ಕೋಸ್ಟ್ ಪೇಪರ್ ಮಿಲ್ (WCPM) ಆವರಣದಲ್ಲಿ ಕಪ್ಪು ಚಿರತೆ (Black Panther) ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರು ಹಾಗೂ ಕಂಪನಿಯ ನೌಕರರಲ್ಲಿ ಆತಂಕವನ್ನುಂಟುಮಾಡಿದೆ.

​ ಬೆಳಗಿನ ಜಾವ ಸುಮಾರು 4:30ರ ವೇಳೆಗೆ ಕಂಪನಿಯ ಜನರಲ್ ಆಫೀಸ್ ಮುಂಭಾಗದಲ್ಲಿ ಕರಿ ಚಿರತೆಯೊಂದು(Black Panther) ರಾಜಾರೋಷವಾಗಿ ಓಡಾಡಿದೆ. ನೌಕರರು ಹಾಗೂ ಸಾರ್ವಜನಿಕರು ನಿತ್ಯ ಸಂಚರಿಸುವ ಜಾಗದಲ್ಲೇ ಚಿರತೆ ಪ್ರತ್ಯಕ್ಷಗೊಂಡಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.

​ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ: ಕಂಪನಿಯ ಆವರಣದ ಸಿಸಿಟಿವಿ ಕೆಮರಾಗಳಲ್ಲಿ ಕಪ್ಪು ಚಿರತೆಯ ಸಂಚಾರದ ದೃಶ್ಯ ಸಂಪೂರ್ಣವಾಗಿ ಸೆರೆಯಾಗಿದೆ. ಬೆಳಗಿನ ಜಾವದ ಪಾಳಿಯಲ್ಲಿ ಕೆಲಸಕ್ಕೆ ಆಗಮಿಸುವ ಮತ್ತು ಕೆಲಸ ಮುಗಿಸಿ ತೆರಳುವ ನೌಕರರು ಈ ದೃಶ್ಯ ಕಂಡು ಆತಂಕಕ್ಕೊಳಗಾಗಿದ್ದಾರೆ.

​ಜನವಸತಿ ಪ್ರದೇಶಗಳಿಗೂ ಲಗ್ಗೆ: ಕಳೆದ ಕೆಲವು ತಿಂಗಳುಗಳಿಂದ ದಾಂಡೇಲಿ(Dandeli) ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಈಗ ಅವುಗಳು ಜನವಸತಿ ಹಾಗೂ ಕೈಗಾರಿಕಾ ಪ್ರದೇಶಗಳತ್ತ ಮುಖ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಾಡಿನಿಂದ ನಾಡಿನತ್ತ ಬರುವ ಚಿರತೆಗಳು ಸಾರ್ವಜನಿಕರಿಗೆ ಹಾಗೂ ಸಾಕುಪ್ರಾಣಿಗಳಿಗೆ ಕಂಟಕವಾಗಿ ಪರಿಣಮಿಸಿವೆ.

​ಕಂಪನಿಯ ಆವರಣದಲ್ಲಿ ಹಾಗೂ ನಗರದ ಸುತ್ತಮುತ್ತ ಚಿರತೆ ಸಂಚಾರ ಹೆಚ್ಚಾಗಿರುವುದರಿಂದ ಅರಣ್ಯ ಇಲಾಖೆ(Forest Department) ತಕ್ಷಣವೇ ಕಾರ್ಯಾಚರಣೆ ನಡೆಸಿ, ಬ್ಲ್ಯಾಕ್ ಪ್ಯಾಂಥರ್ ಅನ್ನು ಬೋನು ಮುಖಾಂತರ ಸೆರೆಹಿಡಿದು ದಟ್ಟ ಅರಣ್ಯಕ್ಕೆ ಬಿಡಬೇಕೆಂದು ಸಾರ್ವಜನಿಕರು ಹಾಗೂ ಮಿಲ್ ನೌಕರರು ಆಗ್ರಹಿಸಿದ್ದಾರೆ.