ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore): ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ವಿಚಾರಣೆ ಎದುರಿಸುತ್ತಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಶಿಕ್ಷೆ ಪ್ರಮಾಣ ನಾಳೆ ಪ್ರಕಟವಾಗಲಿದೆ.
ಮಾಜಿ ಸಚಿವ ಮತ್ತು ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಕಳೆದ 14 ತಿಂಗಳಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ಇತ್ತು.
ಪ್ರಜ್ವಲ್ ರೇವಣ್ಣವಿರುದ್ಧ ದಾಖಲಾಗಿರುವ ನಾಲ್ಕು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಒಂದರ ತೀರ್ಪು ಪ್ರಕಟಗೊಳಿಸಲಾಗಿದೆ.
ಪ್ರಜ್ವಲ್ ಅವರ ತೋಟದ ಮನೆಯಲ್ಲಿ ಮಾಜಿ ಮನೆಕೆಲಸದವಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊರಿಸಲಾಗಿತ್ತು. ಸಂತ್ರಸ್ತೆ ಏಪ್ರಿಲ್ 28, 2024 ರಂದು ಹಾಸನದ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನ್ಯಾಯಾಲಯ ತೀರ್ಪು ಪ್ರಕಟಿಸುವ ಮೊದಲು, ಉಭಯ ಕಡೆಯ ವಕೀಲರಿಂದ ಕೆಲವು ಸ್ಪಷ್ಟಿಕರಣಗಳನ್ನು ಕೇಳಿತ್ತು. ಮೊಬೈಲ್ ಸ್ಥಳ ಡೇಟಾ ಮತ್ತು ಇತರ ತಾಂತ್ರಿಕ ಪುರಾವೆಗಳ ಕುರಿತು ವಿವರಣೆಗಳನ್ನು ಅದು ನೀಡುವಂತೆ ಹೇಳಿತ್ತು.
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಒಂದು ದಿನದ ನಂತರ ಬೆಳಕಿಗೆ ಬಂದ ಬಹು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಅವರು ಪ್ರಮುಖ ಆರೋಪಿ. ಸಾಮಾಜಿಕ ಮಾಧ್ಯಮಗಳಲ್ಲಿ ಬಹು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತೋರಿಸುವ ಅಶ್ಲೀಲ ವೀಡಿಯೊ ತುಣುಕುಗಳು ವೈರಲ್ ಆಗಿದ್ದವು. ಇಂಥ ವೀಡಿಯೊಗಳನ್ನು ಹೊಂದಿರುವ ಪೆನ್ ಡ್ರೈವ್‌ಗಳನ್ನು ಹಾಸನದಲ್ಲಿ ಹಂಚಲಾಗಿತ್ತು. ಆನಂತರ ಪೊಲೀಸರು ವಶಪಡಿಸಿಕೊಂಡಿದ್ದರು. ನಂತರ ಪ್ರಜ್ವಲ್ ಏಪ್ರಿಲ್ 27, 2024 ರಂದು ದೇಶದಿಂದ ತಲೆ ಮರೆಸಿಕೊಂಡಿದ್ದರು.
ಪ್ರಕರಣಗಳ ದಾಖಲಾದ ನಂತರ, ರಾಜ್ಯ ಸರ್ಕಾರವು ಅವರ ವಿರುದ್ಧದ ಎಲ್ಲಾ ಆರೋಪಗಳ ತನಿಖೆಗಾಗಿ ಸಿಐಡಿ ಅಡಿಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಅನ್ನು ರಚಿಸಿತ್ತು. ಪ್ರಜ್ವಲ್ ರೇವಣ್ಣ ಅವರನ್ನು ಮೇ 31, 2024 ರಂದು ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಬಂಧಿಸಲಾಗಿತ್ತು.
ಪ್ರಜ್ವಲ್ ಅವರ ಮೊಬೈಲ್ ನಲ್ಲಿ ನಾಲ್ಕು ನೂರಕ್ಕೂ ಅಧಿಕ ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋಗಳು ಇದ್ದವು ಎಂಬ ಆರೋಪ ಕೇಳಿಬಂದಿತ್ತು. ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ಅಸ್ತ್ರವಾಗಿ ಬಳಸಿಕೊಂಡು ದೇಶಾದ್ಯಂತ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದವು.
ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಸಹ ಪ್ರಜ್ವಲ್ ರೇವಣ್ಣ ಕರ್ನಾಟಕಕ್ಕೆ ವಾಪಸ್ ಬರದಿದ್ದಾಗ ಪತ್ರ ಬರೆದು ವಾಪಸ್ ಬಂದು ಕಾನೂನಿಗೆ ಗೌರವಿಸುವಂತೆ ಹೇಳಿದ್ದರು. ಆನಂತರ ಪ್ರಜ್ವಲ್ ರೇವಣ್ಣ ಕರ್ನಾಟಕಕ್ಕೆ ಬಂದಿದ್ದಾಗ ಬಂಧಿಸಲಾಗಿತ್ತು.
ಇದನ್ನು ಓದಿ : ನಾಪತ್ತೆಯಾದ ಮೀನುಗಾರರಿಗಾಗಿ ಮುಂದುವರಿದ ಶೋಧ. ಓರ್ವನ ಮೃದೇಹ ಪತ್ತೆ.
ಸೌಹಾರ್ಧದ ಹೆಸರಿಟ್ಟು ಹಣಕಾಸು ಸಂಸ್ಥೆಗಳಿಂದ ಸಾಲಗಾರರ ಲೂಟಿ. ಸಾಲಗಾರರ ಸಂಘ ಆಕ್ರೋಶ