ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣಾ ಪೂರ್ವದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಸುಧಾಕರ ಅವರಿಗೆ ಸವಾಲ್ ಎಸೆದಿದ್ದ ಶಾಸಕ ಪ್ರದೀಪ್ ಈಶ್ವರ್ ನಿವಾಸದ ಮೇಲೆ ರಾತ್ರಿ ಕಲ್ಲು ತೂರಾಟ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿರುವ ಶಾಸಕ ಪ್ರದೀಪ್ ಈಶ್ವರ್ ಗೃಹಕಚೇರಿಯ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪರಿಣಾಮವಾಗಿ ಮನೆಯ ಹಿಂಭಾಗದಲ್ಲಿ ಕಿಟಕಿಯ ಗಾಜು ಪುಡಿ ಪುಡಿಯಾಗಿದೆ.
ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರದೀಪ್ ಈಶ್ವರ್ ಅವರು ಬಿಜೆಪಿಯ ಸುಧಾಕರ ಅವರು ಒಂದೇ ಒಂದು ವೋಟಿಂದ ಲೀಡ್ ತೆಗೆದುಕೊಂಡು ಗೆಲ್ಲಲಿ. ಗೆದ್ದಲ್ಲಿ ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದರು. ಇದೀಗ ಡಾ ಸುಧಾಕರ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಈಶ್ವರ್ ಅವರ ವಿಡಿಯೋ ವೈರಲ್ ಆಗಿದೆ.
ಹೀಗಾಗಿ ಆಕ್ರೋಶಗೊಂಡ ಬೆಂಬಲಿಗರು ದಾಳಿ ನಡೆಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.