ಕಾರವಾರ(KARWAR) : ಮುಖ್ಯಮಂತ್ರಿ ಸಿದ್ದರಾಮಯ್ಯ(CHIEF MINISTER SIDDARAMAIHA) ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಸೋಮವಾರ ಕಾಂಗ್ರೇಸ್(CONGRESS) ರಣಕಹಳೆ ಮೊಳಗಿಸಿದೆ.
ಕೆಪಿಸಿಸಿ(KPCC) ಕರೆಯ ಮೇರೆಗೆ ಕಾರವಾರದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಮಿತ್ರ ಸಮಾಜ ಮೈದಾನದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಕಾರವಾರದ ಸುಭಾಸ್ ವೃತ್ತ, ಸವಿತಾ ವೃತ್ತ, ಮುಖ್ಯ ರಸ್ತೆ, ಪಿಕಳೆ ರಸ್ತೆ ಮೂಲಕ ತೆರಳಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ, ಶಾಸಕರಾದ ಸತೀಶ್ ಸೈಲ್, ಭೀಮಣ್ಣ ನಾಯ್ಕ ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿದರು. ಈ ವೇಳೆ ಕಾರ್ಯಕರ್ತರು ರಾಜ್ಯಪಾಲ(GOVERNER) ತಾವೆರ್ಚಂದ್ ಗೆಹಲೊಟ್ ಅವರ ಫಲಕ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರಾದ ಮಂಕಾಳ್ ವೈದ್ಯ, ರಾಜ್ಯಪಾಲರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರ ನಡೆಯನ್ನ ನಾವು ಖಂಡಿಸಿದ ಅವರು, ಬಿಜೆಪಿಯವರು ರಾಜ್ಯಪಾಲ ಮರ್ಯಾದೇ ಕಳೆಯುತ್ತಿದ್ದಾರೆ. ಬಿಜೆಪಿಗರ ಮಾತು ಕೇಳಿ ರಾಜ್ಯಪಾಲರೆ ತಮ್ಮ ಸ್ಥಾನದ ಗೌರವ ಕಳೆಯಬೇಡಿ ಎಂದರು. ಬಿಜೆಪಿಯವರು ಸಿಎಂ ಸ್ಥಾನದಿಂದ ಇಳಿಸಬೇಕು. ಸರ್ಕಾರ ಆಸ್ತಿರಗೊಳಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜನಪರ ಕೆಲಸ ಬಿಜೆಪಿಯವರಿಗೆ ನೋಡಲು ಆಗುತ್ತಿಲ್ಲ ಎಂದು ಹೇಳಿದ ಅವರು ಇಡೀ ಸರ್ಕಾರವೇ ಸಿದ್ದರಾಮಯ್ಯ ಪರ ನಿಂತಿದ್ದೇವೆ ಎಂದರು .
ಬಿಜೆಪಿಯವರು ಮಾಡಿದ ತಪ್ಪು ಇಡೀ ರಾಷ್ಟ್ರಕ್ಕೆ ಗೊತ್ತಿದೆ. ಸಿದ್ದರಾಮಯ್ಯ ಅವರ ಬಗ್ಗೆ ಕೂಡ ಗೊತ್ತಿದೆ. ಆದರೂ ನಮ್ಮ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಮಾತನಾಡಿ, ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ತರಹದ ಬೇಜವಬ್ದಾರಿಯ ರಾಜ್ಯಪಾಲರನ್ನ ನಾನೆಂದು ನೋಡಿಲ್ಲ. ರಾಜ್ಯಪಾಲರ ಸ್ಥಾನಕ್ಕೆ ಗೌರವವಿದೆ. ಕೇಂದ್ರ ಹೇಳಿದ ಪ್ರಕಾರ ನಡೆದುಕೊಳ್ಳುತ್ತಿರುವುದು ನಾಡಿನ ಜನರಿಗೆ ಅವಮಾನವಾಗಿದೆ ಎಂದರು.
ಸಿದ್ದರಾಮಯ್ಯ ಅವರ ಜೀವನ ಕಳಂಕರಹಿತ ಜೀವನವಾಗಿದೆ. ಯಾವುದೇ ಆಪಾದನೆ ಅವರ ಮೇಲಿಲ್ಲ. ಮುಡಾ ವಿಚಾರದಲ್ಲಿ ಪಾರದರ್ಶಕತೆ ಇದೆ. ಕಾನೂನಿನಂತೆ ಜಮೀನನ್ನ ಸಿದ್ದರಾಮಯ್ಯ ಅವರ ಪತ್ನಿ ಪಡೆದಿದ್ದಾರೆ. ಒಳ್ಳೆಯ ವ್ಯಕ್ತಿಗೆ ತೊಂದರೆ ತರಬೇಕೆಂದರೆ ಸಾಧ್ಯವಾಗುವುದಿಲ್ಲ. ಇಡೀ ಸರ್ಕಾರ, ಕಾಂಗ್ರೆಸ್ ಪಕ್ಷ ಅವರ ಬೆನ್ನಿಗೆ ನಿಲ್ಲುತ್ತೇವೆಂದ ಅವರು, ಗವರ್ನರ್ ಮಾಡಿದ ನಿರ್ಣಯವನ್ನ ನಾವು ಖಂಡಿಸುತ್ತೇವೆ ಎಂದರು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ರಾಜ್ಯಪಾಲರು ಅವರದೇ ಚೌಕಟ್ಟಿನಲ್ಲಿ ಕೆಲಸ ಮಾಡಬೇಕೆಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಕ್ಕೆ ಖಂಡಿಸಿದರು. ತಕ್ಷಣ ರಾಜ್ಯಪಾಲರನ್ನ ವಜಾಗೊಳಿಸಿ ಬೇರೆ ರಾಜ್ಯಪಾಲರನ್ನ ನಿಯೋಜನೆಗೊಳಿಸಬೇಕು. ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಸಮಾನತೆ, ಏಕತೆಯ ಅಭಿವೃದ್ಧಿ ಮಾಡಿದ್ದಾರೆ. ಧೀಮಂತ ನಾಯಕನ ಮೇಲೆ ಕಪ್ಪು ಚುಕ್ಕೆ ಬರುವಂತೆ ಬಿಜೆಪಿ ದುರುದ್ದೇಶ ಮಾಡುತ್ತಿದೆ ಎಂದರು.
ಮುಡಾ ಹಗರಣದಲ್ಲಿ ಏನು ಇಲ್ಲವೆಂದು ರಾಜ್ಯದಲ್ಲಿ ಜನತೆಗೆ ತಿಳಿಸಿದ್ದೇವೆ. ಕಾನೂನು ವ್ಯಾಪ್ತಿಯಲ್ಲಿ ಮುಡಾ ಸೈಟ್ ಹಂಚಿಕೆ ಆಗಿದೆ. ಬಿಜೆಪಿಯವರು ಯಾವತ್ತು ಜನರ ಹಿತ ಕಾಪಾಡುವವರಲ್ಲ. ರಾಜ್ಯದಲ್ಲಿ ಗೊಂದಲ ಸೃಷ್ಟಿಸಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬರುವ ಹುನ್ನಾರು ನಡೆಸಿದ್ದಾರೆ. ರಾಜ್ಯದ ಜನ ಇದನ್ನ ಸಹಿಸಲ್ಲ. ಕೇಂದ್ರ ಸರ್ಕಾರ ಎಚ್ಛೆತ್ತುಕೊಂಡು ರಾಜ್ಯಪಾಲರನ್ನ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.