ಇ ಸಮಾಚಾರ ಡಿಜಿಟಲ್ ನ್ಯೂಸ್ (esamacharadigital news) ದಾಂಡೇಲಿ(Dandeli) : ಏಳು ವರ್ಷದ ಹಿಂದೆ ರಾಜ್ಯದ ಜನರನ್ನ ಬೆಚ್ಚಿ ಬೀಳಿಸಿದ್ದ ದಾಂಡೇಲಿಯ ಹಿರಿಯ ವಕೀಲ(Senior Lawyer) ಅಜಿತ್ ನಾಯ್ಕ ಅವರ ಬರ್ಬರ ಹತ್ಯೆ ಪ್ರಕರಣದ ತೀರ್ಪು ಶುಕ್ರವಾರ ಪ್ರಕಟವಾಗಿದೆ.
ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಯಲ್ಲಾಪುರ ಪೀಠದಿಂದ ನೀಡಿದ ತೀರ್ಪಿನಲ್ಲಿ ಪ್ರಮುಖ ಆರೋಪಿ ಪಾಂಡುರಂಗ ಮಾರುತಿ ಕಾಂಬಳೆ ವಿರುದ್ಧ ಆರೋಪ ಸಾಬೀತಾಗಿದೆ ಎಂದು ಘೋಷಿಸಲಾಗಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಜನವರಿ 13ರಂದು ಶಿರಸಿ(Sirsi) ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ. ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ನಾಲ್ವರು ಆರೋಪಿಗಳನ್ನು ಸಾಕ್ಷಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.
ಪ್ರಕರಣದಲ್ಲಿ ಹತ್ಯೆಗೊಳಗಾದ ಅಜಿತ್ ನಾಯ್ಕ ಅವರ ಪರವಾಗಿ ಪಬ್ಲಿಕ್ ಪ್ರೊಸಿಕ್ಯೂಟರ್ ರಾಜೇಶ ಮಳಗೀಕರ ಸಮರ್ಥವಾಗಿ ವಾದ ಮಂಡಿಸಿದ್ದರು. ಬಲವಾದ ಸಾಕ್ಷ್ಯಾಧಾರಗಳನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ತನಿಖೆಯನ್ನು ಅಂದಿನ ಸಿಪಿಐ ಅನೀಸ್ ಮುಜಾವರ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಉತ್ತರಕನ್ನಡ ಜಿಲ್ಲೆಯ(Uttarakannada District) ಜನತೆಯನ್ನ ಬೆಚ್ಚಿಬೀಳಿಸಿದ ಪ್ರಕರಣ ಇದಾಗಿದ್ದು ದಾಂಡೇಲಿ ನಗರದಲ್ಲಿ ಹಿಂದೆಂದೂ ಆಗಿರದ ಭೀಕರ ಹಾಗೂ ಹಿಂಸಾತ್ಮಕ ಕೃತ್ಯ ನಡೆದಿತ್ತು. ಸದಾ ಹೋರಾಟದ ಮನೋಭಾವ ಹೊಂದಿದ್ದ ಅಜಿತ್ ನಾಯಕ ಪ್ರತ್ಯೇಕ ದಾಂಡೇಲಿ ತಾಲೂಕು(Dandeli Taluku) ರಚನೆಗೆ ಪ್ರಮುಖ ಕಾರಣರಾಗಿದ್ದರು. ಅವರು ತಮ್ಮ ಕಚೇರಿ ಎದುರು ನಿಂತಿದ್ದ ವೇಳೆ ಪ್ರಮುಖ ಆರೋಪಿ ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದನು.
ಈ ಹತ್ಯೆಯ ಹಿಂದೆ ಭೂ ಮಾಫಿಯಾಗಳ ಕೃತ್ಯವಿರುವುದು ತನಿಖೆಯಿಂದ ಬಹಿರಂಗವಾಗಿದೆ. ತಮ್ಮ ಕಕ್ಷಿದಾರ ಮತ್ತು ಜಮೀನಿನ ಮಾಲೀಕರ ಪರವಾಗಿ ಅಜಿತ್ ನಾಯಕ ಗಟ್ಟಿಯಾಗಿ ನಿಂತಿದ್ದರಿಂದ, ಅವರು ಬದುಕಿದ್ದರೆ ಜಮೀನು ಕೈಗೆ ಸಿಗುವುದಿಲ್ಲ ಎಂಬ ಭಯದಿಂದ ಹತ್ಯೆ ನಡೆಸಿರೋದು ಗೊತ್ತಾಗಿದೆ. ಬರ್ಬರ ಕೃತ್ಯದ ನಂತರವೂ ಆರೋಪಿಗಳು ಜೈಲಿನಲ್ಲಿದ್ದು, ಕಾಳಿನದಿ(Kali River) ದಂಡೆಯಲ್ಲಿರುವ ವಿವಾದಿತ ಜಮೀನನ್ನು ಪ್ರವಾಸೋದ್ಯಮಿಯೊಬ್ಬರಿಗೆ ಮಾರಾಟ ಮಾಡಲು ಮುಂದಾಗಿದ್ದರು.
ವಕೀಲರೊಬ್ಬರ ಬರ್ಬರ ಹತ್ಯೆಗೆ ನ್ಯಾಯಾಲಯ ಶಿಕ್ಷೆ ವಿಧಿಸಿರುವುದಕ್ಕೆ ವಕೀಲ ವೃಂದ ಸಂತಸ ವ್ಯಕ್ತಪಡಿಸಿದ್ದು, ನ್ಯಾಯ ವ್ಯವಸ್ಥೆಯ ಮೇಲೆ ವಿಶ್ವಾಸ ಪುನಃ ದೃಢಗೊಂಡಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನು ಓದಿ : ಮಾಜಿ ಸಿಎಂ ಬಂಗಾರಪ್ಪ ಅನುಯಾಯಿ ಭಟ್ಕಳದ ಎಲ್. ಎಸ್. ನಾಯ್ಕ ಅಸ್ತಂಗತ.
ಮರಕ್ಕೆ ಢಿಕ್ಕಿ ಹೊಡೆದ ಸರ್ಕಾರಿ ಬಸ್. ಎರಡು ತಾಸು ಬಸ್ನಲ್ಲಿ ಸಿಲುಕಿದ ಬಾಲಕ. ಹಲವರಿಗೆ ಗಾಯ
