ಕಾರವಾರ(KARWAR) : ನಗರದ ಹೃದಯ ಭಾಗದಲ್ಲಿರುವ ಗಾಂಧಿ ಮಾರ್ಕೆಟ್ ನ ಕೆಡವಿದ ಅಂಗಡಿಯ ಮಣ್ಣುಗಳನ್ನ ತೆರವುಗೊಳಿಸಿದ ವಿಚಾರದಲ್ಲಿ ಸದಸ್ಯರ ನಡುವೆ ಗಲಾಟೆ ನಡೆದಿದೆ.
1956 ರಲ್ಲಿ ಕಾರವಾರದಲ್ಲೊಂದು ಗಾಂಧಿ ಮಾರ್ಕೆಟ್ ನಿರ್ಮಿಸಲಾಗಿತ್ತು. ನೂರಾರು ಅಂಗಡಿಗಳಿದ್ದವು. ಅಂದಿನ ಬಾಡಿಗೆ ದರದಿಂದಲೇ ಇತ್ತೀಚಿನ ವರ್ಷದವರೆಗೂ ನಗರಸಭೆಗೆ ಬಾಡಿಗೆ ಸಂದಾಯವಾಗುತಿತ್ತು. ಆದರೆ ಮೂಲ ಅಂಗಡಿಕಾರರು ಹೆಚ್ಚಿನ ಬಾಡಿಗೆಗೆ ಬೇರೆಯವರಿಗೆ ನೀಡಿದ್ದರೂ ಎಂಬ ಆರೋಪವು ಇತ್ತು.
ಗಾಂಧಿ ಮಾರ್ಕೆಟ್ ಜೀರ್ಣಾವಸ್ಥೆಗೆ ತಲುಪಿದಾಗ ಹೊಸ ಮಾರ್ಕೆಟ್ ನಿರ್ಮಿಸುವ ಪ್ಲ್ಯಾನ್ ನ್ನ ನಗರಸಭೆ ಮಾಡಿತ್ತು. 2017ರಲ್ಲಿ ಹಿಂದೆ ಹಳೆ ಮೀನು ಮಾರ್ಕೆಟ್ ಗೆ ಹೊಂದಿಕೊಂಡ 52 ಅಂಗಡಿಗಳನ್ನ ತೆಗೆದು ಹೊಸ ಮೀನು ಮಾರುಕಟ್ಟೆ ನಿರ್ಮಿಸಲಾಗಿದೆ. ಇದೀಗ ಅಲ್ಲಿ ಮೀನು ವಹಿವಾಟು ನಡೆಯುತ್ತಿದೆ.
2021ರಲ್ಲಿ ಗಾಂಧಿ ಮಾರ್ಕೆಟ್ ನ ಇನ್ನೊಂದು ಬದಿಯಲ್ಲಿ ಅಂಗಡಿಗಳನ್ನ ತೆರವುಗೊಳಿಸಲು ಮುಂದಾದಾಗ ಅಂಗಡಿಕಾರರಿಂದ ವಿರೋಧವೂ ವ್ಯಕ್ತವಾಗಿತ್ತು. ಆದರೂ ನಗರಸಭೆ ಸುಮಾರು 72 ಅಂಗಡಿಗಳನ್ನ ಡೆಮೋಲಿಶ್ ಮಾಡಿತ್ತು. ಇನ್ನೂ 41 ಅಂಗಡಿಕರಾರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ.
ಈ ನಡುವೆ ಕೆಡವಿದ ಅಂಗಡಿಗಳ ಕಲ್ಲು ಮಣ್ಣುಗಳು ಅಸಹ್ಯ ಹುಟ್ಟಿಸುತ್ತಿದೆ. ಬಿದ್ದ ಕಲ್ಲು ಮಣ್ಣುಗಳನ್ನ ಇಷ್ಟು ದಿನ ತೆಗೆಯದೆ ಇರುವುದರಿಂದ ಗಟಾರ ಕೂಡ ತುಂಬಿ ಹೋಗಿದೆ. ಮೊನ್ನೆ ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ರವಿರಾಜ್ ಅಂಕೋಲೆಕರ್ ಮತ್ತು ಉಪಾಧ್ಯಕ್ಷೆ ಪ್ರೀತಿ ಜೋಶಿ ಅವರು ತಮ್ಮ ಸದಸ್ಯರ ಜೊತೆಗೂಡಿ ಇಂದು ಬೆಳಿಗ್ಗೆ ಗಾಂಧಿ ಮಾರ್ಕೆಟ್ ಬಳಿ ಬಂದಿದ್ದರು. ಬರುವಾಗ ಜೆಸಿಬಿಯೊಂದಿಗೆ ಬಂದಿದ್ದರು. ಈ ಹಿಂದೆ ಕೆಡವಿದ ಕಲ್ಲು ಮಣ್ಣುಗಳನ್ನ ತೆರವುಗೊಳಿಸಲು ಮುಂದಾದರು. ಇದೆ ಸಂದರ್ಭದಲ್ಲಿ ಇನ್ನೂ ಕೆಲ ಸದಸ್ಯರು ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದರು.
ಉಭಯ ಪಕ್ಷಗಳ ಸದಸ್ಯರ ಗಲಾಟೆ ಜೋರಾಯಿತು. ಸ್ಥಳಕ್ಕೆ ಪೊಲೀಸರು ಆಗಮಿಸಬೇಕಾಯಿತು. ಯಾರ ಅನುಮತಿ ಪಡೆದು ಮಣ್ಣನ್ನು ಒಯುತ್ತಿದ್ದೀರಿ ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದರು. ನಗರಸಭೆಯ ಸಭೆಯಲ್ಲಿ ಠರಾವು ಮಾಡದೇ ಯಾಕೆ ಕೆಲಸಕ್ಕೆ ಮುಂದಾಗಿದ್ದಿರಿ ಎಂದು ಕೇಳಿದಾಗ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಸದಸ್ಯರ ನೀನಾ ನಾನಾ ಪ್ರಹಾಸನದಿಂದಾಗಿ ನಾಗರಿಕರು ಗೊಂದಲಕ್ಕಿಡಾದರು. ಕೊನೆಗೆ ಉಸಾಬರಿಯೆ ಬೇಡವೆಂದು ಜೆಸಿಬಿ ವಾಪಾಸ್ ಹೋಯಿತು. ಮುಂದೆ ಸಭೆ ನಡೆಸಿ ಠರಾವು ಮಾಡಿ ತೆರವುಗೊಳಿಸೋಣ ಎಂಬ ತೀರ್ಮಾನಕ್ಕೆ ಬರಲಾಗಿದೆ. ಸೋಮವಾರ ಬಹುತೇಕ ನೂತನ ಆಡಳಿತ ಮಂಡಳಿ ಸಭೆ ನಡೆಯಬಹುದು.
ಇದನ್ನು ಓದಿ : ಅರಬ್ಬೀ ಸಮುದ್ರದಲ್ಲಿ ತೂಫಾನ್