ಗೋಕರ್ಣ :  ತೊರ್ಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಸಾಕಲ್ ಮತ್ತು ಹೊಸ್ಕಟ್ಟಾ ಬಳಿ ಗಜನಿ ಪ್ರದೇಶದಲ್ಲಿ ಮೀನು ಹಿಡಿಯುವ ವಿಷಯದಲ್ಲಿ ಮೀನುಗಾರರ ಎರಡು ಗುಂಪುಗಳ ನಡುವೆ ಗಲಾಟೆಯಾಗಿ  ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ.

     ಗಜನಿ ಪ್ರದೇಶದ ಜಂತ್ರಡಿ ನಿರ್ವಹಣೆ ಮತ್ತು ಅಲ್ಲಿ ಬಲೆ ಹಾಕಿ ಮೀನು ಹಿಡಿಯಲು  ಪ್ರವೀರ್ ತಿಮ್ಮಪ್ಪ ಹರಿಕಂತ್ರ ಮತ್ತು ಪ್ರಮೋದ ದಯಾನಂದ ಹೊಸ್ಕಟ್ಟಾ ತೊರ್ಕೆ ಗ್ರಾಮ ಪಂಚಾಯ್ತಿಯಿಂದ ಟೆಂಡರ್ ಪಡೆದಿದ್ದು, ಬುಧವಾರ ಸಂಜೆ ಇಬ್ಬರೂ ಬಂಡಿನ ಗೇಟಿನ ನಿರ್ವಹಣೆ ಮತ್ತು  ಮೀನು ಹಿಡಿಯಲು ಹೋದಾಗ ಈ ಗಲಾಟೆ ನಡೆದಿದೆ.

     ಹೊಸ್ಕಾಟ್ಟಾದ ಪರಮೇಶ್ವರ ಮಂಕಾಳಿ ಹರಿಕಂತ್ರ, ಮಂಜುನಾಥ ಮಂಕಾಳಿ ಹರಿಕಂತ್ರ, ಅನಂತ ಮಂಕಾಳಿ ಹರಿಕಂತ್ರ, ರಾಜು ವೆಂಕಟ್ರಮಣ ಹರಿಕಂತ್ರ ಮತ್ತು ಜಗದೀಶ ವೆಂಕಟ್ರಮಣ ಹರಿಕಂತ್ರ ಎಲ್ಲರೂ ಗುಂಪು ಕಟ್ಟಿಕೊಂಡು ಬಂದು ಪ್ರವೀರ್ ಮತ್ತು ಪ್ರಮೋದ ಇವರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದದಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರವೀರ್ ತಿಮ್ಮಪ್ಪ ಹರಿಕಂತ್ರ ಪೊಲೀಸ್  ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಅದಕ್ಕೆ ಪ್ರತಿಯಾಗಿ ಪರಮೇಶ್ವರ ಮಂಕಾಳಿ ಹರಿಕಂತ್ರ , ಹೊಸ್ಕಟ್ಟಾದ  ಸದಾನಂದ  ಮಂಕಾಳಿ ಹರಿಕಂತ್ರ, ಗೋಪಾಲ ಹುಲಿಯಪ್ಪ ಹೊಸ್ಕಟ್ಟಾ, ಕೃಷ್ಣ ಹುಲಿಯಪ್ಪ ಹೊಸ್ಕಟ್ಟಾ, ಘಟ್ಟಾ ಹುಲಿಯಪ್ಪ ಹರಿಕಂತ್ರ, ರಾಮಚಂದ್ರ ಬೊಮ್ಮಯ್ಯ ಹರಿಕಂತ್ರ, ಪ್ರದೀಪ ದೇವಣ್ಣ ಮಸಾಕಲ್, ರಾಘು ತಿಮ್ಮಪ್ಪ ಹರಿಕಂತ್ರ, ರಾಮ ವೆಂಕಟ್ರಮಣ ಹರಿಕಂತ್ರ, ಪ್ರಮೋದ ದಯಾನಂದ ಹರಿಕಂತ್ರ, ಶಿವಾನಂದ ಗಜಾನನ ಹರಿಕಂತ್ರ, ದಯಾನಂದ ರಾಮ ಹರಿಕಂತ್ರ, ಜೈವಂತ ಗೋವಿಂದ ಹರಿಕಂತ್ರ, ನಾಗರಾಜ ಮೋಹನ ಹರಿಕಂತ್ರ, ಪ್ರವೀರ್ ತಿಮ್ಮಪ್ಪ ಹರಿಕಂತ್ರ  ಮತ್ತು ಮಾದೇವ  ಸುಕ್ರು ಹರಿಕಂತ್ರ ಎಲ್ಲರೂ ಸೇರಿ ಬುಧವಾರ ಸಂಜೆ ನಮ್ಮ ಗಜನಿ ಜಮೀನಿನಲ್ಲಿ ಮೀನು‌ ಹಿಡಿಯುತ್ತಿರುವಾಗ, ಏಕಾಏಕಿ ಮೈಮೇಲೆ ಏರಿಬಂದು ಹಲ್ಲೆ ಮಾಡಿದಲ್ಲದೇ, ಅವಾಚ್ಯ ಶಬ್ದದಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎರಡು ಕಡೆಯಿಂದ ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.