ಹೊನ್ನಾವರ :  ತಾಲೂಕಿನ ಗೇರಸೊಪ್ಪಾ (Gerusoppa) ಹೆದ್ದಾರಿಯಲ್ಲಿ ಎದುರಿನಿಂದ ಬರುತ್ತಿದ್ದ ಮಾರುತಿ ಓಮ್ನಿ ವ್ಯಾನ್ ಹಾಗೂ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಆತನ ಪತ್ನಿ ಗಾಯಗೊಂಡಿದ್ದಾರೆ.

ಮೃತರನ್ನು ಭಟ್ಕಳ (Bhatkal) ಮಖ್ದೂಮ್ ಕಾಲೋನಿ ನಿವಾಸಿ ಸೈಯದ್ ಅಬ್ದುಲ್ ವಾಜಿದ್ (40) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಅವರ ಪತ್ನಿ ಗುಲ್ಶನ್ ಅರಾ ಗಾಯಗೊಂಡಿದ್ದು, ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದುಬೈನಿಂದ ಕೆಲ ದಿನಗಳ ಹಿಂದೆ ಭಟ್ಕಳಕ್ಕೆ ಮರಳಿದ ಅಬ್ದುಲ್ ವಾಜಿದ್ ತನ್ನ ಸಹೋದರ ಸಹೋದರಿಯರನ್ನು ಭೇಟಿ ಮಾಡಲು ಪತ್ನಿಯೊಂದಿಗೆ ಓಮಿನಿಯಲ್ಲಿ  ರಾಷ್ಟ್ರೀಯ ಹೆದ್ದಾರಿ ಮೂಲಕ ಶಿವಮೊಗ್ಗ (Shivamogga) ಜಿಲ್ಲೆಯ ಶಿರಾಳಕೊಪ್ಪ ಗ್ರಾಮಕ್ಕೆ ತೆರಳುತ್ತಿದ್ದರು. ಗೇರುಸೊಪ್ಪ ಸಮೀಪ ಓಮ್ನಿಗೆ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಬ್ದುಲ್ ವಾಜಿದ್ ಮತ್ತು ಆತನ ಪತ್ನಿ ಗಾಯಗೊಂಡಿದ್ದಾರೆ.

ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಬ್ದುಲ್ ವಾಜಿದ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಉಡುಪಿ ಆಸ್ಪತ್ರೆಗೆ ವರ್ಗಾಯಿಸಲು ಪ್ರಯತ್ನಿಸಲಾಗಿದೆ. ಆದರೆ, ಗಾಯಗೊಂಡಿದ್ದ ಅಬ್ದುಲ್ ವಾಜಿದ್  ಉಡುಪಿಯ ಖಾಸಗಿ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಮೃತ ಅಬ್ದುಲ್ ವಾಜಿದ್ ಅವರು ಮೂವರು ಪುತ್ರರು ಸೇರಿದಂತೆ ಆರು ಮಕ್ಕಳನ್ನು ಅಗಲಿದ್ದಾರೆ. ಗಾಯಗೊಂಡಿರುವ ಅವರ ಪತ್ನಿ ಚಿಕಿತ್ಸೆ ನೀಡಲಾಗಿದೆ. ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.