ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಆಹಾರ ಹುಡುಕಿ ನಾಡಿಗೆ ಬಂದ ಚಿರತೆಯೊಂದು(Leopard) ಬಾವಿಗೆ ಬಿದ್ದ ಘಟನೆ ಭಟ್ಕಳ ತಾಲೂಕಿನ ಯಲ್ವಡಿಕವೂರ ಗ್ರಾಮದಲ್ಲಿ(Yalvadikawooru Village) ಸಂಭವಿಸಿದೆ.
ಗ್ರಾಮದ ನಾರಾಯಣ ನಾಯ್ಕ ಎಂಬುವವರ ಮನೆಯ ಆವರಣದಲ್ಲಿರುವ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ(Forest Department) ಹಾಗೂ ವನ್ಯಜೀವಿ ರಕ್ಷಕರ ತಂಡ(Wild Animals Rescue Team) ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ಸುರಕ್ಷಿತವಾಗಿ ರಕ್ಷಣೆ ಮಾಡಿದೆ.
ಭಾನುವಾರ ಬೆಳಿಗ್ಗೆ ನಾರಾಯಣ ಅವರ ಮನೆಯ ಆವರಣದಲ್ಲಿದ್ದಾಗ ಬಾವಿಯಿಂದ ನಿರಂತರವಾಗಿ ಕೋಗುವ ಶಬ್ದ ಕೇಳಿಬರುತಿತ್ತು. ಅನುಮಾನಗೊಂಡು ಬಾವಿಯೊಳಗೆ ನೋಡಿದಾಗ ಸುಮಾರು ಎರಡರಿಂದ ಮೂರು ವರ್ಷದ ಗಂಡು ಚಿರತೆಯೊಂದು(Male Leopard) ಬಾವಿಗೆ ಬಿದ್ದು ಮೇಲಕ್ಕೆ ಬರಲಾಗದೆ ಒದ್ದಾಡುತ್ತಿರುವುದು ಗೊತ್ತಾಯಿತು. ತಕ್ಷಣ ಅವರು ಅರಣ್ಯ ಇಲಾಖೆಗೆ(Forest Department) ಮಾಹಿತಿ ನೀಡಿದರು.
ಮಾಹಿತಿ ಪಡೆದ ಅರಣ್ಯ ಇಲಾಖೆ(Forest Department) ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ(Rescue Operations) ಆರಂಭಿಸಿದರು. ಗೋಕರ್ಣ ತದಡಿಯ ವನ್ಯಜೀವಿ ರಕ್ಷಕರಾದ ಅಶೋಕ ನಾಯ್ಕ, ಮಹೇಶ ನಾಯ್ಕ ಹಾಗೂ ನಾಗರಾಜ ಹರಿಕಾಂತ ಅವರ ತಂಡವೂ ಸ್ಥಳಕ್ಕೆ ಆಗಮಿಸಿ ಅರಣ್ಯ ಸಿಬ್ಬಂದಿಯೊಂದಿಗೆ ಸಮನ್ವಯದಿಂದ ಕಾರ್ಯಾಚರಣೆ ನಡೆಸಿತು. ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಚಿರತೆಯನ್ನು ಬಾವಿಯಿಂದ ಮೇಲಕ್ಕೆತ್ತಿ ಬೋನಿಗೆ ಹಾಕುವಲ್ಲಿ ಯಶಸ್ವಿಯಾಗಿದೆ.
ರಕ್ಷಣಾ ಕಾರ್ಯಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಅರಣ್ಯ ಸಿಬ್ಬಂದಿಗಳು ಸ್ಥಳೀಯರನ್ನು ಸುರಕ್ಷಿತ ಅಂತರದಲ್ಲಿ ನಿಲ್ಲಿಸಿದರು. ಆದರೂ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು ಆಗಮಿಸಿ ಚಿರತೆಯನ್ನು ನೋಡಲು ಮುಗಿಬಿದ್ದರು.
ರಕ್ಷಿಸಲಾದ ಚಿರತೆ ಆರೋಗ್ಯವಾಗಿದ್ದು, ಪ್ರಾಥಮಿಕ ಪರಿಶೀಲನೆಯ ಬಳಿಕ ಅದನ್ನು ಸುರಕ್ಷಿತವಾಗಿ ದೂರದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಆರ್ಎಫ್ಒ ವಿಶ್ವನಾಥ ನಾಯ್ಕ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಡಿಆರ್ಎಫ್ಒ ಮಾರುತಿ ಸೋರಗಾಂವಿ, ಫಾರೆಸ್ಟರ್ಗಳಾದ ಮಹೇಶ ಅಜ್ಜರ, ನಾಗರಾಜ ನಾಯ್ಕ, ಸಂದೀಪ್ ಭಂಡಾರಿ ಹಾಗೂ ಸಿಬ್ಬಂದಿಗಳಾದ ರಾಮಕೃಷ್ಣ ನಾಯ್ಕ, ಮಾದೇವ ನಾಯ್ಕ, ಕುಪ್ಪಯ್ಯ ಗೊಂಡ, ಮಹೇಶ ನಾಯ್ಕ, ಈಶ್ವರ ನಾಯ್ಕ, ವರುಣ್ ಚೌಹಾಣ್ ಸೇರಿದಂತೆ ಹಲವು ಸಿಬ್ಬಂದಿಗಳು ಮತ್ತು ವನ್ಯಜೀವಿ ರಕ್ಷಕರು ಭಾಗವಹಿಸಿದ್ದರು.
ಇದನ್ನು ಓದಿ : ಕಾರವಾರದಲ್ಲಿ ದೇವಾಲಯಗಳ ಸರಣಿ ಕಳ್ಳತನ. ಕಳ್ಳನ ಹಿಡಿದ ಪೊಲೀಸರು.
