ಕಾರವಾರ: ರಾಜ್ಯದಲ್ಲಿರುವ ಖಾಸಗಿ ಕೈಗಾರಿಕಾ ಹಾಗೂ ಸರ್ಕಾರೇತರ ಸಂಸ್ಥೆಗಳ ವಲಯದಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ 100 ರಷ್ಟು ಹುದ್ದೆಗಳಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕರವೇ ಪದಾಧಿಕಾರಿಗಳು ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಮನವಿ ಸಲ್ಲಿಸಿದರು.
ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡ ನೇತೃತ್ವದಲ್ಲಿ ಕನ್ನಡ ಸೇನಾನಿಗಳು ರಾಜ್ಯಾದ್ಯಂತ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಇಡೀ ದೇಶದಲ್ಲೇ ಅತಿ ಹೆಚ್ಚು ಭೌಗೋಳಿಕ ಸಂಪನ್ಮೂಲಗಳನ್ನು ಹೊಂದಿದೆ. ಇತ್ತೀಚಿನ ಎರಡು ಮೂರು ದಶಕಗಳಿಂದ ಪರ ರಾಜ್ಯದ ವಲಸೆ ಹಾವಳಿ ತಾರಕಕ್ಕೆ ಏರಿದೆ. ಮೊದಲು ದಕ್ಷಿಣ ಭಾರತದ ಇತರ ರಾಜ್ಯಗಳಿಂದ ಜನರು ಬಂದು ಇಲ್ಲಿ ನೆಲೆಸಿದರು . ಈಗ ಉತ್ತರದ ರಾಜ್ಯಗಳಿಂದ ಈಶಾನ್ಯ ರಾಜ್ಯಗಳಿಂದ ವಲಸೆ ಪ್ರವಾಹವೇ ಹರಿದು ಬರುತ್ತಿದೆ. ವಲಸೆಯ ದುಷ್ಪರಿಣಾಮದಿಂದಾಗಿ ಕನ್ನಡ ನಾಡಿನ ಭೌಗೋಳಿಕ ಸಾಮಾಜಿಕ ರಾಜಕೀಯವಾಗಿ ಚಹರೆ ಬದಲಾಗುತ್ತಿದೆ. ಈ ಮಹಾ ವಲಸೆಯ ಮುಖ್ಯ ದುಷ್ಪರಿಣಾಮ ಖಾಸಗಿ ಹಾಗೂ ಸರ್ಕಾರೇತರ ಕೈಗಾರಿಕೆಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಹೊರ ರಾಜ್ಯಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿದ್ದು ಅವರು ತಮ್ಮ ತಮ್ಮ ರಾಜ್ಯದ ಕಾರ್ಮಿಕರನ್ನು ಕರೆ ತಂದು ಕೆಲಸ ಕೊಡುತ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕೈಗಾರಿಕೆ ಮತ್ತು ಸಂಘ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಆದ್ದರಿಂದ ಕರ್ನಾಟಕ ಸರ್ಕಾರ ಬಲಿಷ್ಠ ಕಾನೂನು ರೂಪಿಸಿ ಕನ್ನಡಿಗರಿಗೆ ಶೇ.100 ರಷ್ಟು ಉದ್ಯೋಗ ಮೀಸಲಾತಿ ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ನರೇಂದ್ರ ತಳೇಕರ, ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಮಂಜುನಾಥ ನಾಯಕ, ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಕಡವಾಡ ಗ್ರಾಮೀಣ ಘಟಕ ಉಪಾಧ್ಯಕ್ಷ ಪ್ರಶಾಂತ ತಾಂಡೇಲ ಮುಂತಾದವರು ಉಪಸ್ಥಿತರಿದ್ದರು.