ಕಾರವಾರ :  ಜಿಲ್ಲೆಯಲ್ಲಿ ಇನ್ನೂ ಮೂರ್ನಾಲ್ಕು ದಿನಗಳು ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಗೆ ರಾಜ್ಯ ಸರ್ಕಾರದಿಂದ 2 ರಾಷ್ಟಿಯ ವಿಪತ್ತು ನಿರ್ವಹಣಾ ತಂಡಗಳನ್ನು ಬೆಂಗಳೂರಿನಿ0ದ  ಜಿಲ್ಲೆಗೆ ಆಗಮಿಸಿವೆ.

ಎನ್.ಡಿ.ಆರ್.ಎಫ್ ನ ಪ್ರತಿ ತಂಡದಲ್ಲಿ ತಲಾ 25 ಮಂದಿ ರಕ್ಷಣಾ ಸಿಬ್ಬಂದಿಗಳಿರಲಿದ್ದು, ಯಾವುದೇ ರೀತಿಯ ತುರ್ತು ಕಾರ್ಯಚರಣೆಯನ್ನು ಕೈಗೊಳ್ಳಲು ಅಗತ್ಯವಿರುವ ಎಲ್ಲಾ ಅಗತ್ಯ ರಕ್ಷಣಾ ಸಾಧನಗಳೊಂದಿಗೆ ಬರುವ ಈ ತಂಡವನ್ನು ಕಾರವಾರ, ಕುಮಟಾ ಮತ್ತು ಅಂಕೋಲ ಭಾಗದಲ್ಲಿ ನಿಯೋಜಿಸಲಾಗುತ್ತದೆ.

ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ತೊಂದರೆಗೊಳಗಾದ ಹೊನ್ನಾವರ, ಕುಮಟಾ ಮತ್ತು ಅಂಕೋಲ ತಾಲೂಕು ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದು, ಅವರಿಗೆ ಸಮೀಪದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಜಿಲ್ಲೆಯಲ್ಲಿ ಹೊನ್ನಾವರದಲ್ಲಿ 4 , ಕುಮಟಾದಲ್ಲಿ 2 ಮತ್ತು ಅಂಕೋಲದಲ್ಲಿ 1 ಸೇರಿದಂತೆ ಒಟ್ಟು 7 ಕಾಳಜಿ ಕೆಂದ್ರಗಳನ್ನು ತೆರೆದಿದ್ದು ಈ ಕೇಂದ್ರಗಳಲ್ಲಿ 230 ಕ್ಕೂ ಅಧಿಕ ಮಂದಿಗೆ ಆಶ್ರಯ ನೀಡಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಸಂಬ0ದಪಟ್ಟ ತಾಲೂಕುಗಳ ತಹಸೀಲ್ದಾರ್ ಗಳಿಗೆ ಸೂಚನೆ ನೀಡಲಾಗಿದೆ.

  ವ್ಯಾಪಕ ಮಳೆಯಾಗುತ್ತಿರುವ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು 24*7 ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ,ಅಗತ್ಯ ನೆರವು ಒದಗಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ

ಅಘನಾಶಿನಿ ಮತ್ತು ಶರಾವತಿ ನದಿಗಳು ತುಂಬಿ ಹರಿಯುತ್ತಿದ್ದು ಈ ಭಾಗದಲ್ಲಿ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದು , ಈ ಪ್ರದೇಶಗಳ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಕಾಳಿ ನದಿಯಲ್ಲಿನ ಅಪ್ಪರ್ ಕಾನೇರಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕ ಕ್ರಮವಾಗಿ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವರಿಗೆ ಸರ‍್ಷಕಿತ ಸ್ಥಳಗಳಿಗೆ ತೆರಳಲು ಈಗಾಗಲೇ ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಮಾನವ ಜೀವ ಹಾನಿ ಯಾಗದಂತೆ ಎಲ್ಲಾ ರೀತಿಯ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಾನುವಾರು ಪ್ರಾಣ ಹಾನಿ ತಡೆಗೂ ಅಗತ್ಯ  ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಸಾರ್ವಜನಿಕರು ಯಾವುದೇ ಸಮಸ್ಯೆಗಳಲ್ಲಿ ಉಚಿತ ತುರ್ತು ಸಹಾಯವಾಣಿ ಸಂಖ್ಯೆ 1077 ಗೆ ಹಾಗೂ ಮೊ.ಸಂ. ಸಂಖ್ಯೆ 94835 11015 ಕರೆ , ಮೆಸೆಜ್, ವಾಟ್ಪಾಪ್ ಸಂದೇಶ ಮತ್ತು ವಾಟ್ಸಾಪ್ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.