ಕುಮಟಾ: ಕೊಲಂಬೋದಲ್ಲಿ ನಡೆದ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಭಾರತದಿಂದ ಪ್ರತಿನಿಧಿಸಿದ ಕುಮಟಾ ತಾಲೂಕಿನ ಕಡ್ಲೆಯ ಸುರೇಶ ಅಂಬಿಗ 400 ಮೀಟರ್ ಹರ್ಡಲ್ಸ್ ನಲ್ಲಿ 3ನೇ ಸ್ಥಾನ, 100 ಮತ್ತು 200 ಮೀಟರ್ ಓಟದಲ್ಲಿ 4ನೇ ಸ್ಥಾನದೊಂದಿಗೆ ಕಂಚಿನ ಪದಕ ತನ್ನದಾಗಿಸಿಕೊಂಡು ಭಾರತ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಸುರೇಶ ಅವರು ಈ ಹಿಂದೆ ಕಾಲೇಜು ಶಿಕ್ಷಣದ ವೇಳೆ ಕ್ರೀಡೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಂಬ ಛಲದಿಂದ ಕೆಲಸದ ಒತ್ತಡಗಳ ನಡುವೆಯೂ ಸತತವಾಗಿ 8 ರಿಂದ 9 ತಿಂಗಳುಗಳ ಕಾಲ ಬೆಂಗಳೂರಿನಲ್ಲಿ ತರಬೇತಿ ಪಡೆದಿದ್ದರು.
ಹಲವು ವರ್ಷಗಳ ಬಳಿಕ ಸುರೇಶ ಅಂಬಿಗ ಅವರು ಬೆಂಗಳೂರಿನ ತರಬೇತುದಾರರಾದ ಲಕ್ಷ್ಮಣ ಪಡಿಮನಿ ಅವರಿಂದ ಸತತವಾಗಿ ತರಬೇತಿ ಪಡೆದುಕೊಂಡಿದ್ದಾರೆ. ಬಳಿಕ ಒಂದೆರಡು ಬಾರಿ ದಕ್ಷಿಣ ಭಾರತ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ನಲ್ಲಿ ಸಹ ಭಾಗವಹಿಸಿ 3 ಚಿನ್ನ ಹಾಗೂ 2 ಬೆಳ್ಳಿಯ ಪದಕ ಪಡೆದುಕೊಂಡಿದ್ದರು.
ಹಲವು ವರ್ಷಗಳ ಬಿಡುವಿನ ನಂತರ ಮತ್ತೆ ಓಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ನಾನು ಅಂದುಕೊಂಡ ಗುರಿಯನ್ನು ಹೇಗಾದರೂ ಸಾಧಿಸಬೇಕೆಂಬ ಛಲ ಇಂದು ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಲು ಹಾಗೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ಬಯಕೆ ಇದೆ ಎಂದು ಸುರೇಶ ಅಂಬಿಗ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.