ಮುಂಡಗೋಡ: ನಿರುದ್ಯೋಗ ಎಂತಹವರನ್ನ ಇಕ್ಕಟ್ಟಿಗೆ ಸಿಲುಕಿಸುತ್ತೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಹುದ್ದೆಗೆ ಮಹಿಳೆಯನ್ನು ನೇಮಿಸಿಕೊಳ್ಳಲು ಪಟ್ಟಣ ಪಂಚಾಯಿತಿ ಸದಸ್ಯೆಯೊಬ್ಬರು ಬರೋಬ್ಬರಿ ಅರ್ಧ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾಳೆ.
ಹಣ ಡಿಮ್ಯಾಂಡ್ ಮಾಡಿದ ಮೊಬೈಲ್ ಸಂಭಾಷಣೆ ಆಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಮುಂಡಗೋಡ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಅಡುಗೆ ತಯಾರಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಓರ್ವ ಮಹಿಳೆ ಅರ್ಜಿ ಸಲ್ಲಿಸಿದ್ದು, ಆ ವಾರ್ಡ್ನ ಸದಸ್ಯೆಯ ಮನೆಗೆ ಹೋಗಿ ಕೆಲಸ ಮಾಡಿಸಿಕೊಳ್ಳುವಂತೆ ವಿನಂತಿಸಿದ್ದಾರೆ. ಐವತ್ತು ಸಾವಿರ ರೂ. ಹಣ ಕೊಟ್ಟರೆ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಮಹಿಳಾ ಸದಸ್ಯೆ ಹತ್ತಿರ ಕಳುಹಿಸಿದ್ದಾರೆ.
ನಂತರ ಫೋನ್ ಕರೆ ಮಾಡಿದ ಮಹಿಳೆ ನಾವು ಬಡವರಿದ್ದೇವೆ. ಐದರಿಂದ ಹತ್ತು ಸಾವಿರ ರೂ. ಕೊಡುತ್ತೇವೆ. ನಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಿ ಎಂದಾಗ, ಮಹಿಳಾ ಸದಸ್ಯೆ ಮಾತನಾಡಿ ತಿಂಗಳಿಗೆ 3600 ರೂ. ಸಂಬಳ ಸಿಗುತ್ತದೆ. ಶಾಲೆಯ ಶಿಕ್ಷಕರು ಬದಲಾಗುತ್ತಾರೆ. ಆದರೆ, ನೀವು ಖಾಯಂ ಆಗಿ ಇರುತ್ತೀರಿ. ಅಧಿಕಾರಿಗಳಿಗೆ ಹಣ ಕೊಡಬೇಕು. ನನಗೇನೂ ಬೇಡ. ಪಟ್ಟಣ ಪಂಚಾಯಿತಿಯಲ್ಲಿ ಹಣ ಕೊಟ್ಟರೆ ಕೆಲಸ ಮಾಡುತ್ತಾರೆ. 50 ಸಾವಿರ ರೂ. ಕೊಡಿ ಇಲ್ಲದಿದ್ದರೆ, 40 ಸಾವಿರ ರೂ. ಕೊಟ್ಟರೂ ನಿಮ್ಮನ್ನು ನೇಮಕ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಪಟ್ಟಣ ಪಂಚಾಯತ್ ಸದಸ್ಯೆ ಮಾತನಾಡಿದ ಆಡಿಯೋ ಈಗ ವೈರಲ್ ಆಗಿದೆ. ಪಟ್ಟಣದ ತುಂಬೆಲ್ಲ ಚರ್ಚೆಯಾಗುತ್ತಿದೆ.