ನವದೆಹಲಿ : ದೇಶದ ಪ್ರಧಾನಿಯಾಗಿ ಮೂರನೇ ಬಾರಿಗೆ ನರೇಂದ್ರ ಮೋದಿ ಜೂನ್ 9ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಳೆ ಸಂಜೆ ಆರು ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) 293 ಸ್ಥಾನಗಳನ್ನು ಗೆದ್ದ ನಂತರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಶುಕ್ರವಾರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಜೆ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ರಾಷ್ಟ್ರಪತಿಗಳು ಸಹ ಸರ್ಕಾರ ರಚಿಸಲು ಆಹ್ವಾನ ನೀಡಿದರು.
ಈ ವೇಳೆ ಮಾತನಾಡಿದ ಮೋದಿ, ಜೂನ್ 9ರಂದು ಸಂಜೆ ಪ್ರಮಾಣವಚನ ಸಮಾರಂಭ ನಡೆಯುವ ಬಗ್ಗೆ ಮಾಹಿತಿ ನೀಡಿದ್ದೇನೆ. ನಾವು ಸಚಿವರ ಪಟ್ಟಿಯನ್ನು ರಾಷ್ಟ್ರಪತಿಗೆ ನೀಡುತ್ತೇವೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ವಿದೇಶದಿಂದ ಗಣ್ಯರು :
ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರಧಾನಿ ಮೋದಿಯವರ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿತ ವಿದೇಶಿ ನಾಯಕರಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ ಮತ್ತು ಮಾರಿಷಸ್ನ ಉನ್ನತ ನಾಯಕರು ಆಗಮಿಸುವ ಸಾಧ್ಯತೆ ಇದೆ. ಪ್ರಮಾಣ ವಚನ ಸಮಾರಂಭಕ್ಕೆ ಮೋದಿ ಅವರನ್ನು ಆಹ್ವಾನಿಸಿದ್ದು ಬಹುತೇಕ ಗಣ್ಯರು ಆಹ್ವಾನವನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಮೋದಿ ಅವರ ಚುನಾವಣಾ ಗೆಲುವಿಗೆ ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದ್ದನ್ನ ಸ್ಮರಿಸಬಹುದು.