ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಗೋಕರ್ಣ(Gokarn) : ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ಮೇನ್ ಬೀಚ್ನಲ್ಲಿ ಸಮುದ್ರದ ಅಲೆಗಳ ಹಾಗೂ ಸುಳಿಯ ಅಬ್ಬರಕ್ಕೆ ಸಿಲುಕಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನು ಜೀವ ರಕ್ಷಕ (Lifeguard) ಸಿಬ್ಬಂದಿ ಹಾಗೂ ವಾಟರ್ ಸ್ಪೋರ್ಟ್ಸ್(Water sports) ಸಿಬ್ಬಂದಿ ಸಮಯೋಚಿತವಾಗಿ ಕಾರ್ಯಪ್ರವೃತ್ತರಾಗಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಬುಧವಾರ ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಒಟ್ಟು ಆರು ಜನ ಗೆಳೆಯರ ಗುಂಪು ಗೋಕರ್ಣದ ಮೇನ್ ಬೀಚ್ಗೆ(Gokarn mainbeach) ಭೇಟಿ ನೀಡಿ ಸಮುದ್ರದಲ್ಲಿ ಈಜಾಡಲು ಇಳಿದಿತ್ತು. ಈ ವೇಳೆ ನೀರಿನ ಸೆಳೆತ ಹಾಗೂ ಸುಳಿಗೆ ಸಿಲುಕಿದ ಪ್ರವಾಸಿಗರು ದಡಕ್ಕೆ ಬರಲಾಗದೆ ಪರದಾಡುತ್ತಿದ್ದು, ನೀರಿನಲ್ಲಿ ಮುಳುಗಲಾರಂಭಿಸಿದರು.
ಸ್ಥಳದಲ್ಲಿದ್ದ ಎಚ್ಚೆತ್ತ ಜೀವ ರಕ್ಷಕ(lifeguard) ಸಿಬ್ಬಂದಿ ಹಾಗೂ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳು ತಕ್ಷಣವೇ ಸಮುದ್ರಕ್ಕಿಳಿದು ಮೂವರು ಪ್ರವಾಸಿಗರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ರಕ್ಷಣೆಗೆ ಒಳಗಾದ ಪ್ರವಾಸಿಗರು:
-
ಮಹಮದ್ ಅಪ್ಸನ್ ಅಲಿ (21) – ಹಾನಗಲ್ ತಾಲೂಕು, ಹಾವೇರಿ ಮೂಲ.
-
ಆಶ್ರಫ್ ಮೆಹಬೂಬ ಅಲಿ (22) – ಹಾನಗಲ್ ತಾಲೂಕು, ಹಾವೇರಿ ಮೂಲ.
-
ಶ್ರೀನಿವಾಸ ವೆಂಕಟ ಸ್ವಾಮಿ (35) – ಚಿಕ್ಕಬಳ್ಳಾಪುರ ಮೂಲ.
ಸಾಹಸ ಮೆರೆದ ಸಿಬ್ಬಂದಿಗಳು:
ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿಗಳಾದ ಮೋಹನ್ ಅಂಬಿಗ, ರೋಷನ್ ಖಾರ್ವಿ ಹಾಗೂ ಲೋಕೇಶ್ ಹರಿಕಂತ್ರ ಅವರು ಪ್ರವಾಸಿಗರ ರಕ್ಷಣೆಗೆ ಧಾವಿಸಿದರು. ಇವರಿಗೆ ಲೈಫ್ ಗಾರ್ಡ್ ಮೇಲ್ವಿಚಾರಕರಾದ ರವಿ ನಾಯ್ಕ್, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ, ಹಾಗೂ ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಯಾದ ದೀಪಕ್ ಗೌಡ ಮತ್ತು ಮಹೇಶ್ ಹೊಸಕಟ್ಟೆ ಅವರು ಸೂಕ್ತ ಸಹಾಯ ಹಾಗೂ ಸಹಕಾರ ನೀಡುವ ಮೂಲಕ ಮೂವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಮಯಪ್ರಜ್ಞೆ ಮೆರೆದು ಪ್ರವಾಸಿಗರ ಜೀವ ಉಳಿಸಿದ ಜೀವ ರಕ್ಷಕ ಹಾಗೂ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳ ಸಾಹಸ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಪ್ರವಾಸಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.