ಭಟ್ಕಳ : ವಿಶ್ವಕರ್ಮ ಗೆಳೆಯರ ಬಳಗದಿಂದ 7ನೇ ವರ್ಷದ “ಮನೆಗೊಂದು ಗಿಡ” ಅಭಿಯಾನ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಭಟ್ಕಳ ತಾಲೂಕಿನ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಠಾಣಾಧಿಕಾರಿ ಪ್ರಭಾರ ಮೋಹನ ಶೆಟ್ಟಿ ಗಿಡ ನೆಡುವುದರ ಮುಖಾಂತರ ಉದ್ಘಾಟಿಸಲಾಯಿತು.

ಸಂಘದ ಉದ್ದೇಶದಂತೆ ಪ್ರತಿ ವರ್ಷವೂ ಕೂಡ ಒಂದು ಪ್ರದೇಶವನ್ನು ಆಯ್ಕೆ ಮಾಡಿ 200 ಗಿಡಗಳನ್ನು ಮನೆ ಮನೆಗೆ ತೆರಳಿ ಗಿಡ ಬೆಳೆಸುವ ಆಸಕ್ತಿ ಇರುವವರಿಗೆ ಗಿಡ ನೀಡುವುದು ಈ ಅಭಿಯಾನದ ವಿಶೇಷವಾಗಿದೆ. ಸಂಘವು ಅನೇಕ ಸಮಾಜಮುಖಿ ಕೆಲಸದ ಜೊತೆಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿಯವರೆಗೆ ಮಾಡುತ್ತ ಬಂದಿದೆ. ಭಟ್ಕಳದ ಅನೇಕ ಸಂಘ ಸಂಸ್ಥೆಗಳಿಗೂ ಸನ್ಮಾನ ನೀಡಿ ಗೌರವಿಸಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅರಣ್ಯ ಇಲಾಖೆಯ DRFO ಸಂದೀಪ್ ಭಂಡಾರಿ, ನಿವೃತ್ತ ಅಗ್ನಿಶಾಮಕ ಠಾಣಾಧಿಕಾರಿ ರಮೇಶ್ ಶೆಟ್ಟಿ, ಹೆಸ್ಕಾಂ ನ ಸಹಾಯಕ ಅಭಿಯಂತರ ಶಿವಾನಂದ ನಾಯ್ಕ, ಭಟ್ಕಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗಜಾನನ ಎನ್ ಆಚಾರ್ಯ, ಕ್ರಿಯಾಶೀಲ ಗೆಳೆಯರ ಬಳಗದ ಅಧ್ಯಕ್ಷರು ಆಗಿರುವ ದೀಪಕ್ ನಾಯ್ಕ್ ಭಾಗವಹಿಸಿದ್ದರು.

ಸಂಘದ ಅಧ್ಯಕ್ಷರಾದ ಗಜಾನನ ಕೆ ಆಚಾರ್ಯ ಸಂಘದ ಕಾರ್ಯ ಚಟುವಟಿಕೆ ಗಳ ಬಗ್ಗೆ ಮಾತನಾಡಿದರು. ಶಿಕ್ಷಕ ಸುರೇಶ್ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು, ರವಿ ಆರ್ ಆಚಾರ್ಯ ವಂದಿಸಿದರು. ವಿಶ್ವಕರ್ಮ ಗೆಳಯರ ಬಳಗದ ಮಾಜಿ ಅಧ್ಯಕ್ಷರೂ, ಎಲ್ಲ ಸದಸ್ಯರೂ ಉಪಸ್ಥಿತರಿದ್ದರು. ತದ ನಂತರ 200ಮನೆಗಳಿಗೆ ತೆರಳಿ ಗಿಡಗಳನ್ನು ಹಂಚುವುದರ ಮುಖಾಂತರ ಕಾರ್ಯಕ್ರಮ ಸಂಪನ್ನಗೊಂಡಿತು.