ಭಟ್ಕಳ: ಅಳ್ವೆಕೋಡಿ ದೇವಸ್ಥಾನದಲ್ಲಿ ಎಲ್ಲ ಚಟುವಟಿಕೆಗಳೂ ಶ್ರೀದೇವಿಯ ಇಚ್ಛೆಯಂತೆ ನಡೆಯುತ್ತಿವೆ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ಶ್ರೀ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸುವರ್ಣ ಮಹೋತ್ಸವದಲ್ಲಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು.
ಎಲ್ಲ ಕಡೆ ಗಾಳಿ ಇದ್ದರೂ ತಿರುಗುವ ಫ್ಯಾನ್ ಗಾಳಿಗೆ ಹೆಚ್ಚಿನ ಶಕ್ತಿ ಇರುವಂತೆ ದೇವಸ್ಥಾನದಲ್ಲಿ ದೈವತ್ವಕ್ಕೆ ಹೆಚ್ಚಿನ ಮಹತ್ವ ಇದೆ. ಭಕ್ತರಿಗೆ ದೇವಿಯ ಅಭಯ, ಕೆಲ ಕೃಪೆ ನಿರಂತರವಾಗಿದ್ದು, ಭಕ್ತರು ದುಗುಡಕ್ಕೆ ಒಳಗಾಗಬಾರದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಅಳ್ವೆಕೋಡಿಯಲ್ಲಿ ಶ್ರೀ ದುರ್ಗಾಪರಮೇಶ್ವರಿಯ ಕೃಪೆ ಹಾಗೂ ಭಕ್ತರ ನೆರವಿನಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸರಕಾರದಿಂದ ಏನು ಸಾಧ್ಯವೋ ಎಲ್ಲವನ್ನೂ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ ಮಾತನಾಡಿದರು. ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ ಪ್ರಾಸ್ತವಿಕವಾಗಿ ಮಾತನಾಡಿದರು. ಅಳ್ವೆಕೋಡಿ ಶ್ರೀ ಮಾರಿಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ, ಶ್ರೀ ದುರ್ಗಾದೇವಿ ಚಾರಿಟೇಬಲ್ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಹನುಮಂತ ಮಂಜಪ್ಪ ನಾಯ್ಕ, ಉದ್ಯಮಿ ಬಾಬು ಮೊಗೇರ, ಅರ್ಚಕ ಗಜಾನನ ಪುರಾಣಿಕ, ಅಳ್ವೆಕೋಡಿ ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ವಿಠಲ್ ಎಸ್. ದೈಮನೆ. ಆಸರಕೇರಿ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಅರುಣ ನಾಯ್ಕ, ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಅಧ್ಯಕ್ಷ ನಾರಾಯಣ ಬಿ. ಮೊಗೇರ, ಶ್ರೀ ದುರ್ಗಾ ಮೊಗೇರ ಮೀನುಗಾರರ ಅಸೋಶಿಯೇಶನ್ ಅಳೇಕೋಡಿ ಇದರ ಅಧ್ಯಕ್ಷ ಯಾದವ ಮೊಗೇರ, ಅಳ್ವೆಕೋಡಿ ಮತ್ತು ತೆಂಗಿನಗುಂಡಿ ಪರ್ಶಿನ್ ಬೋಟ್ ಅಸೋಶಿಯೇಶನ್ನಿನ ಅಧ್ಯಕ್ಷ ಜಟ್ಟಾ ಮೊಗೇರ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ಶೀಧರ ಶೇಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುಜೇತ ರಂಗಸ್ವಾಮಿ ಹಾಗೂ ಕೃಷ್ಣ ಮೊಗೇರ ರಚಿತ ಶ್ರೀ ದುರ್ಗಾಪರಮೇಶ್ವರಿ ಭಕ್ತಿಗೀತೆ ಧ್ವನಿ ಸುರುಳಿಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ದಾನಿಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಪೂರ್ವದಲ್ಲಿ ಲಕ್ಷ ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.