ಅಂಕೋಲಾ: ಸರ್ಕಾರ ಬಡ ಜನರಿಗಾಗಿ ನೀಡುವ ಯೋಜನೆಗಳು, ಕಾಮಗಾರಿಗಾಗಿ ವೆಚ್ಚ ಮಾಡುವ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ. ಅಂಕೋಲಾ ಪಟ್ಟಣಕ್ಕೆ ಹೊಂದಿಕೊಂಡಿರುವ ಪ್ರದೇಶವೊಂದರಲ್ಲಿ ಬಹುಲಕ್ಷದ ಚರಂಡಿ ಕಾಮಗಾರಿಯೊಂದು ಒಂದುವರೆ ತಿಂಗಳಲ್ಲೇ ಕುಸಿದು ಬಿದ್ದಿದೆ.
ತಾಲ್ಲೂಕಿನ ಕೇಣಿಯ ದೇಶಿನಭಾಗದಲ್ಲಿ ಕಳಪೆ ಕಾಮಗಾರಿ, ಅವೈಜ್ಞಾನಿಕ ಮತ್ತು ಅತಾಂತ್ರಿಕ ಕಾಮಗಾರಿಯಿಂದ ರವಿವಾರ ರಾತ್ರಿ ಕುಸಿದು ಬಿದ್ದಿದೆ. ಸುಮಾರು 38 ಅಡಿ ಉದ್ದದ ಚರಂಡಿ ಕುಸಿದು ಬಿದ್ದು ಹತ್ತಾರು ಮನೆಗಳಿಗೆ ಸಂಚರಿಸಲು ಅಡಚಣೆ ಉಂಟಾಗಿದೆ. ಅಸಲಿಗೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ದಿಂದ 30 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿತ್ತು. ಕೆ.ಆರ್.ಐ.ಡಿ.ಎಲ್ ನ ಹೊರಗುತ್ತಿಗೆ ಅಭಿಯಂತರ ಮುಖಾಂತರ ಕಾಮಗಾರಿ ನಡೆದಿದ್ದು ಈ ಬಗ್ಗೆ ಜನ ಪ್ರತಿನಿಧಿಗಳಿಗೆ ಹಾಗೂ ಶಾಸಕರಿಗೆ ಮಾಹಿತಿಯೇ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಕಾಮಗಾರಿಯಲ್ಲಿ ಕಳಪೆ ಉಂಟಾಗಿದೆ.
ಸುಮಾರು 400ಮೀಟರ್ ಉದ್ದದ ಎಂಟು ಮೀಟರ್ ಆಳದ ಚರಂಡಿ ಕಾಮಗಾರಿ ಮಾಡಲಾಗಿತ್ತು. ಚರಂಡಿಯ ನೀರು ಸರಾಗವಾಗಿ ಹರಿದು ಮುಂದೆ ಹಳೆಯ ಚರಂಡಿಯನ್ನು ಕೂಡಿ ಮುಂದೆ ಹರಿಯಬೇಕು. ಆದ್ರೆ ಇಲಿ ಹಳೆಯ ಚರಂಡಿ 4ಅಡಿ ಎತ್ತರವಾಗಿದ್ದು ಹೊಸ ಚರಂಡಿ ಎಂಟು ಅಡಿ ಎತ್ತರದಲ್ಲಿದೆ. ಎಂಟು ಅಡಿ ಆಳದಿಂದ ಮೇಲಿನ 4 ಅಡಿ ಎತ್ತರದ ಚರಂಡಿಗೆ ಏತ ನೀರಾವರಿಯ ಮೂಲಕ ನೀರು ಹೊರಹಾಕಬೇಕು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಚರಂಡಿಯ ಅಕ್ಕ ಪಕ್ಕದಲ್ಲಿ ಆಳವಾಗಿ ಮಣ್ಣು ತೆಗೆದು ಹೊಂಡ ಮಾಡಲಾಗಿದ್ದು ರಾತ್ರಿಯ ವೇಳೆ ಮಕ್ಕಳು, ಮಹಿಳೆಯರು ಸಂಚರಿಸಲು ಹೆದರುವಂತಾಗಿದೆ. ಅವೈಜ್ಞಾನಿಕ ಕಾಮಗಾರಿಯ ಸಂದರ್ಭದಲ್ಲಿಯೆ ಸೂಕ್ತವಾಗಿ ಕಾಮಗಾರಿ ಮಾಡಿ ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದರು.. ಗುತ್ತಿಗೆದಾರರು ಇಲ್ಲಿನ ಜನರ ಮಾತನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಈಗ ಏಕಾಏಕಿ ಚರಂಡಿ ಕುಸಿದು ಬಿದ್ದಿದೆ. ಮನೆಯಿಂದ ಹೊರಸಂಪರ್ಕ ಕಷ್ಟವಾಗಿದೆ ಎಂದು ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯೊಬ್ಬರು ದೂರಿದರು.
ಈ ಬಗ್ಗೆ ತಹಶೀಲ್ದಾರ್ ಕಚೇರಿಗೆ ದೂರು ಸಲ್ಲಿಸಲಿದ್ದೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ ದುರ್ಗೇಕರ್ ಹೇಳಿದ್ದಾರೆ. ಇಷ್ಟಾದರೂ ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.