*ಕಾರವಾರ : ಪ್ರಸಿದ್ಧ ದ್ವಿಹಸ್ತ ನರಸಿಂಹ ಕ್ಷೇತ್ರವಾಗಿರುವ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶ್ರೀ ಕ್ಷೇತ್ರ ಸಿದ್ದರದ ಶ್ರೀ ನರಸಿಂಹ ದೇವಸ್ಥಾನದಲ್ಲಿ ಮೇ 21ರಂದು ಶ್ರೀ ನರಸಿಂಹ ಜಯಂತಿ ಉತ್ಸವ ಹಮ್ಮಿಕೊಳ್ಳಲಾಗಿದೆ.

ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಹಿನ್ನಲೆ : 17ನೇ ಶತಮಾನಗಳಿಂದ ಸಿದ್ದರ ಗ್ರಾಮದಲ್ಲಿ ನೆಲೆನಿಂತ ಶ್ರೀ ನರಸಿಂಹ ದೇವರನ್ನು ಭಕ್ತರ ಅಭಿಷ್ಟಗಳನ್ನು ಪೂರೈಸಿ, ಪೊರೆಯುವ ದೈವ ಎನ್ನಲಾಗುತ್ತದೆ. ಈ ಮೂಲಕವೇ ಶ್ರೀ ಕ್ಷೇತ್ರ ಸಿದ್ದರವು ಜಾಗೃತ ಕ್ಷೇತ್ರವೆಂದು ಗುರುತಿಸಿಕೊಂಡಿದೆ. ಪ್ರತಿ ವರ್ಷದಂತೆ ಈ ವರ್ಷ ಕ್ರೋಧಿ ನಾಮ ಸಂವತ್ಸರದ ಉತ್ತರಾಯಣ ವಸಂತ ಋತುವಿನ ವೈಶಾಖ ಶುಕ್ಲ ಪಕ್ಷದ ತೃಯೋದಶಿ ಯಂದು ಅಂದರೆ 21/05/2024 ರ ಮಂಗಳವಾರದಂದು ಶ್ರೀ ನರಸಿಂಹ ಜಯಂತಿ ಇರುವ ಹಿನ್ನೆಲೆಯಲ್ಲಿ, ಸಿದ್ದರ ಗ್ರಾಮ ಶ್ರೀ ನರಸಿಂಹ ದೇವಸ್ಥಾನದಲ್ಲಿ ನರಸಿಂಹ ಜಯಂತಿ ಉತ್ಸವನ್ನು ಅತಿ ಸಂಭ್ರಮದಿಂದ ಆಚರಿಸಲು ತಿರ್ಮಾನಿಸಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಅಂದು ಬೆಳಗ್ಗೆಯಿಂದಲೇ ಶ್ರೀ ನರಸಿಂಹ ದೇವರ ಆವರಣದಲ್ಲಿ ವಿವಿಧ ದಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಸ್ಥಾನ ಆಡಳಿತ ಮಂಡಳಿ ಹಮ್ಮಿಕೊಂಡಿದೆ. *ಅಂದು ಬೆಳಗ್ಗೆ 7 ಗಂಟೆಯಿಂದ ದೇವಸ್ಥಾನದಲ್ಲಿಇರುವ ಶ್ರೀ ನರಸಿಂಹ ಸಹಿತಿ ಪ್ರಾಕಾರ ದೇವರುಗಳಿಗೆ ಅಭ್ಯಂಗಸ್ನಾನಾದಿಗಳು, ಪ್ರಾಕಾರ ಪೂಜೆಗಳು ನಡೆಯಲಿವೆ. 9.00 ಗಂಟೆಯಿಂದ ಗಣಪತಿ ಪೋಜೆ, ಪೂಣ್ಯಾಹ, ಕಲಶಸ್ಥಾಪನೆ, ಕಲಾವೃದ್ದಿ, ನರಸಿಂಹ ಮೂಲಮಂತ್ರ ಹವನ ಪೂರ್ಣಾಹುತಿ ಇದರ ಜೊತೆ ಜೊತೆಗೆ ನರಸಿಂಹ ದೇವರ ಮಹಾ ಅಭಿಷೇಕ, ಪ್ರಧಾನ ಕಲಾಶಾಭಿಷೇಕ ಪೂಜೆ , ಕ್ಷೇತ್ರಪಾಲ ಬಲಿ ಇತ್ಯಾದಿ ಧಾರ್ಮಿಕ ಅಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 1.30 ರಿಂದ 3.30ರವರೆಗೆ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದ್ದು, ಶ್ರೀ ಕ್ಷೇತ್ರ ಸಿದ್ದರ ಗ್ರಾಮದಲ್ಲಿ ನಡೆಯಲಿರು ನರಸಿಂಹ ದೇವರ ಪಲ್ಲಕ್ಕಿ ಉತ್ಸವಕ್ಕೆ ಸಂಜೆ 4.30ಕ್ಕೆ ನರಸಿಂಹ ದೇವಸ್ಥಾನದಲ್ಲಿ ಚಾಲನೆ ಸಿಗಲಿದೆ. ಸಂಜೆ 5.30ಕ್ಕೆ ದೇವಸ್ಥಾನದಲ್ಲಿ ನಾಮಸಂಕೀರ್ತನೆ ನಡೆಯಲಿದ್ದು, ರಾತ್ರಿ 8.30ಕ್ಕೆ ಆಲಯಕ್ಕೆ ಉತ್ಸವದ ಆಗಮನದ ನಂತರ, ಅಷ್ಟಾವಧಾನ ಸೇವೆ, ಮಹಾಪೂಜೆ, ಸಾರ್ವಜನಿಕ ಪ್ರಾರ್ಥನೆ ಪ್ರಸಾದ ( ಪಾನಕ, ಪಚಡಿ) ವಿತರಣೆಯಾಗಲಿದೆ.

ಅಂದು ರಾತ್ರಿ 10.30ಕ್ಕೆ ಶ್ರೀ ನರಸಿಂಹ ವೇದಿಕೆಯಲ್ಲಿನ ನಾಡಿನ ಹೆಸರಾಂತ ಕೊಂಕಣಿ ರಂಗ ತಂಡ ʻಸಾಕಾರ ನಾಟಕ ಸಂಘ ʼ ದವರಿಂದ ʻಆಜಾ ಸಾವಧಾನ… ಬಾಬ್‌ ವಿಶ್ರಾಮ..” ಎನ್ನುವ ಹಾಸ್ಯಮಯ ತತ್ವಾಧಾರಿತ ನಾಟಕದ ಪ್ರದರ್ಶನ ನಡೆಯಲಿದೆ*. ಶ್ರೀ ನರಸಿಂಹ ದೇವಸ್ಥಾನದಲ್ಲಿ ನಡೆಯುವ ನರಸಿಂಹ ಜಯಂತಿಯ ಸಂದರ್ಭದಲ್ಲಿ ನಡೆಯುವ ಹೋಮದ ಅಧ್ವರ್ಯಕ್ಕೆ ( ಯಜಮಾನಿಕೆಗೆ ) ಹಾಗೂ ಶ್ರೀ ದೇವರಿಗೆ ಅಭಿಷೇಕ ಮಾಡಿಸುವುದಕ್ಕೆ ಭಕ್ತರಿಗೆ, ಕುಳಾವಿಗಳಿಗೆ ಹಾಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ *ಶ್ರೀ ದತ್ತಾತ್ರೇಯ ಗಾವಂಕರ 9481914922, ಶ್ರೀ ರಾಜೇಂದ್ರ ರಾಣೆ 9448408643, ಶ್ರೀನಾಥ ಜೋಶಿ 9060188081* ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಕ್ಷೇತ್ರ ಸಿದ್ದರದ ಶ್ರೀ ನರಸಿಂಹ ನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.