ಕಾರವಾರ : ಉತ್ತರಕನ್ನಡ ಜಿಲ್ಲೆಯ ಕೆಲ ಸ್ಥಳಗಳನ್ನ ಸಿನೆಮಾದಲ್ಲಿ ಪರಿಚಯಿಸಿದ ಚಿತ್ರ ಮಸಣದ ಹೂವು. ಖ್ಯಾತ ನಿರೂಪಕಿ ಅಪರ್ಣ ನಟಿಸಿದ್ದ ಮಸಣದ ಹೂವು ಈಗ ನೆನಪು ಮಾತ್ರ ಎಂದು ಇಲ್ಲಿನ ಜನ ಗದ್ಗದಿತರಾಗಿದ್ದಾರೆ.
ಬೇಲೇಕೇರಿ (BELEKERI), ಕಾರವಾರ (KARWAR), ಗೊಕರ್ಣ (GOKARN) “ಮಸಣದ ಹೂವು” ಚಿತ್ರದ ಹಾಡು ಚಿತ್ರೀಕರಣಗೊಂಡಿತ್ತು. ಅಪರ್ಣ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು ಬೇಲೇಕೇರಿಯಲ್ಲಿ ಚಿತ್ರಿತವಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂವು ಸಿನೇಮಾದ ಮೂಲಕ. ಆ ಸಿನೇಮಾದ ಹಾಡೊಂದರಲ್ಲಿ ನಮ್ಮ ಜಿಲ್ಲೆಯ ಬುಡಕಟ್ಟು ಜನಾಂಗವಾದ ಹಾಲಕ್ಕಿ ಹೆಣ್ಣುಮಕ್ಕಳಂತೆ ಅಲಂಕಾರ ಮಾಡಿಕೊಂಡು ಸಂಭ್ರಮಿಸಿದ್ದರು ಎಂದು ಕವಿ, ಸಾಹಿತಿ ಶ್ರೀಧರ ನಾಯಕ ಬೇಲೆಕೇರಿ ಹೇಳಿದ್ದಾರೆ.
ನಿರೂಪಕಿ ಅಪರ್ಣ ಕನ್ನಡ ದೂರದರ್ಶನದ ಆರಂಭದ ದಿವಸಗಳಿಂದ ಈ ತನಕವೂ ಕಾರ್ಯಕ್ರಮಗಳನ್ನು ನಿರೂಪಿಸುತ್ತ ಬೆಳೆದವರು. ಕಿರುತೆರೆಯನ್ನು ಬೆಳೆಸಿದವರು. ಈವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನ ನಿರೂಪಿಸಿದ್ದಾರೆ.
2004 ರಿಂದ ಮತ್ತೆ ಅಭಿನಯದತ್ತ ಗಮನ ಹರಿಸಿ, ಜನಪ್ರಿಯ ಧಾರಾವಾಹಿ ‘ಮುಕ್ತ’ದ ಮುಖೇನ ಶೀಲಾ ಪ್ರಸಾದ್ ಪಾತ್ರವಾಗಿ ಮನೆ ಮಾತಾದವರು. ‘ಪ್ರೀತಿಯಿಲ್ಲದ ಮೇಲೆ’ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಗುರುತಿಸಿಕೊಂಡವರು. ಸದ್ಯಕ್ಕೆ ಝೀ-ವಾಹಿನಿಯ ‘ಜೋಗುಳ’ ಸರಣಿಯಲ್ಲಿ ಪ್ರಧಾನಭೂಮಿಕೆಯಲ್ಲಿದ್ದಾರೆ. ಕನ್ನಡಪ್ರಭ ಸಾಪ್ತಾಹಿಕದ ‘ಸಖೀಗೀತ’ದ ಅಂಕಣಕಾರ್ತಿ. ‘ಪ್ರೀತಿಯಿಲ್ಲದ ಮೇಲೆ’ಯ ಪಲ್ಲವಿಯ ಪಾತ್ರಕ್ಕೆ ಶ್ರೇಷ್ಠನಟಿ ಪ್ರಶಸ್ತಿ, ನಿರೂಪಣೆಗಾಗಿ ಝೀ-ವಾಹಿನಿಯಿಂದ ಅತ್ಯುತ್ತಮ ಪ್ರಶಸ್ತಿ, ಕಿರುತೆರೆಯ ಮಾಧ್ಯಮದ ‘ಈವರೆಗಿನ’ ಕೆಲಸಕ್ಕೆ ಸರ್ವೋಚ್ಛ ಪ್ರಶಸ್ತಿಯನ್ನು ಪಡೆದಿದ್ದಾರೆ.
2005ರಲ್ಲಿ ಇವರು ಯುವ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದರು. ಅಪರ್ಣ ಅವರ ತಂದೆ ಕೆ.ಎಸ್.ನಾರಾಯಣಸ್ವಾಮಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದರು. ಅವರ ಅಕಾಲಿಕ ನಿಧನ ಸಮಸ್ತ ಕನ್ನಡಿಗರಿಗೆ ದುಖಃ ತರಿಸಿದೆ.