ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಇಲ್ಲಿನ ನ್ಯೂ ಇಂಗ್ಲಿಷ್ ಸ್ಕೂಲಿನ ಜನಪ್ರಿಯ ಇಂಗ್ಲಿಷ್ ಶಿಕ್ಷಕಿ ರಾಜಂ ಚಂದ್ರಹಾಸ ಹಿಚ್ಕಡರವರಿಗೆ ರಾಷ್ಟ್ರಮಟ್ಟದ ಶಿಕ್ಷಣ ಸೌರಭ ಪ್ರಶಸ್ತಿ ಲಭಿಸಿದೆ.
ದೀರ್ಘಕಾಲಿಕವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಶಿವಮೊಗ್ಗ ಜಿಲ್ಲಾ ಘಟಕವು ಈ ಪ್ರಶಸ್ತಿಗೆ ರಾಜಂ ಹಿಚ್ಕಡರವರನ್ನು ಆಯ್ಕೆಗೊಳಿಸಿದೆ.
ಯಾವುದೇ ಪ್ರಶಸ್ತಿ ಪುರಸ್ಕಾರಗಳ ಹಪಹಪಿಕೆಯಿಲ್ಲದೇ ತನ್ನಷ್ಟಕ್ಕೆ ತಾನು ಮಾಡಬೇಕಾದ ಕರ್ತವ್ಯವನ್ನು ಶೃದ್ಧಾ-ಭಕ್ತಿಯಿಂದ ಮಾಡುತ್ತಲೇ ಬಂದಿರುವ ರಾಜಂ ಹಿಚ್ಕಡರವರು ತಮ್ಮ ನೇರ ನುಡಿ, ನಿಷ್ಟೂರ ನಡೆ ಹಾಗೂ ನಿರ್ಭೀತ ಗುಂಡಿಗೆಯಿಂದ ಇಲಾಖೆಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಅನನ್ಯವಾದ ವ್ಯಕ್ತಿತ್ವವನ್ನು ಹೊಂದಿ ವಿಶೇಷವೆನಿಸಿದವರಾಗಿದ್ದು, ಸಮಾಜಮುಖಿಯಾಗಿ ನಿರಂತರವಾಗಿ ತೊಡಗಿಸಿಕೊಂಡು ಪ್ರಜ್ಞಾವಂತರಿಗೆ ಆಪ್ತರಾಗಿದ್ದು, ಅಸಂಖ್ಯ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಅಪಾರ ಅಭಿಮಾನಿಗಳನ್ನು ಹೊಂದಿದವರಾಗಿದ್ದು, ಅವರಿಗೆ ಪ್ರಶಸ್ತಿಯು ಲಭಿಸಿರುವುದು ಅರ್ಹತೆಗೆ ಸಂದ ಗೌರವವು ಎಂದು ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಕೋಶ್ಯಾಧ್ಯಕ್ಷರಾದ ಶಿವಚಂದ್ರ ಮತ್ತು ಡಾ. ಆರ್.ಎಂ. ಕುಬೇರಪ್ಪ ಅಭಿಮಾನಿ ಬಳಗದ ಉತ್ತರ ಕನ್ನಡ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ವಿಜಯಕುಮಾರ್ ಹಾಗೂ ಅಧ್ಯಕ್ಷರಾದ ಆರ್. ಜೆ. ನಾಯ್ಕ ಕಣ್ಮಣಿ ಅಭಿಪ್ರಾಯಸಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ಪ್ರಧಾನವು ಶಿವಮೊಗ್ಗದ ಬಿಹೆಚ್ ರಸ್ತೆಯಲ್ಲಿರುವ ಕರ್ನಾಟಕ ಸಂಘದ ಸಭಾಭವನದಲ್ಲಿ ರವಿವಾರದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇದನ್ನು ಓದಿ : ಸ್ವಾಮೀಜಿ ಕಾಲಿಗೆ ಬಿದ್ದದ್ದು ಮುಳುವಾಯ್ತು ಆರು ಮಂದಿ ಪೊಲೀಸರಿಗೆ.