ಅಂಕೋಲಾ(Ankola) : ವೃಕ್ಷಮಾತೆ, ಪದ್ಮಶ್ರಿ ಪ್ರಶಸ್ತಿಗೆ ಭಾಜನರಾಗಿದ್ದ ತುಳಸಿ ಗೌಡ ಅವರ ಅಂತ್ಯಕ್ರಿಯೆ ಇಂದು ಅಂಕೋಲಾದ ಹೊನ್ನಳ್ಳಿ ಗ್ರಾಮದಲ್ಲಿ ನಡೆಯಿತು. ಸರ್ಕಾರಿ ಗೌರವಗಳೊಂದಿಗೆ ಗಣ್ಯರು, ಸಮುದಾಯದ ನಾಗರಿಕರು, ಗ್ರಾಮಸ್ಥರು ಅಂತಿಮ ದರ್ಶನ ಪಡೆದರು.
ಸೋಮವಾರ ಸಂಜೆ ಅವರು ಇಹಲೋಕ ತ್ಯಜಿಸಿದ ತುಳಸಿ ಅವರ ಪಾರ್ಥಿವ ಶರೀರವನ್ನು ಮನೆ ಸಮೀಪ ಇರುವ ಜಮೀನಿನಲ್ಲಿ ತರಲಾಯಿತು. ಅಂಕೋಲಾ ತಾಲೂಕು ಆಡಳಿತದಿಂದ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆ ಹಾಗೂ ಹೊರ ಜಿಲ್ಲೆಯ ಗಣ್ಯರು ಆಗಮಿಸಿ ಅವರ ಅಂತಿಮ ದರ್ಶನ ಪಡೆದುಕೊಂಡರು.
ಪೊಲೀಸ್ ಇಲಾಖೆಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ನಿಯಮದಂತೆ ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಲಾಯಿತು. ಕಾರವಾರ ಶಾಸಕರಾದ ಸತೀಶ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಪುಷ್ಪ ನಮನ ಸಲ್ಲಿಸಿದರು.
ಬಳಿಕ ಅವರ ಕುಟುಂಬದವರು, ಸಮುದಾಯದವರು ಅಗ್ನಿ ಸ್ಪರ್ಶ ಮಾಡುವ ಮೂಲಕ ವಿಧಿ ವಿಧಾನ ನೆರವೇರಿಸಿದರು.
ತುಳಸಿ ಅವರು ಕಳೆದ ನಾಲ್ಕೈದು ದಶಕಗಳಿಂದ ಗಿಡಮರಗಳ ಬಗ್ಗೆ ಅಪಾರ ಪ್ರೀತಿ ಹೊಂದಿದವರು. ತಾವೆ ಸ್ವತಃ ಕಾಡಿಗೆ ಹೋಗಿ ಬಿದ್ದ ಬೀಜಗಳನ್ನ ಆಯ್ದು ಅವುಗಳನ್ನ ನಾಟಿ ಮಾಡಿ ಸಸಿ ತಯಾರಿಸುತ್ತಿದ್ದರು. ಬಳಿಕ ಅವರುಗಳನ್ನ ಅರಣ್ಯದಲ್ಲಿ ನೆಟ್ಟು ಪೋಷಣೆ ಮಾಡುತ್ತಿದ್ದರು. ಅಲ್ಲದೆ ಸುಮಾರು 40 ವರ್ಷಕ್ಕೂ ಅಧಿಕ ಕಾಲ ದಿನಗೂಲಿಯಾಗಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪರಿಸರ ಪ್ರೀತಿ ಎಲ್ಲರಿಗೂ ಮಾದರಿಯಾಗಿದ್ದವು. ಈ ಹಿಂದೆ ಅವರಿಗೆ ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, 2021ರಲ್ಲಿ ಭಾರತ ಸರ್ಕಾರದ ಅತ್ಯುನ್ನತವಾದ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಬರಿಗಾಲಲ್ಲಿ ತೆರಳಿ ಪ್ರಶಸ್ತಿ ಸ್ವೀಕರಿಸಿದ್ದರು. ಉತ್ತರಕನ್ನಡ ಜಿಲ್ಲೆಗೆ ಅವರು ತಮ್ಮ ಮಾದರಿ ಕಾರ್ಯಗಳಿಂದ ಹೆಮ್ಮೆ ತಂದುಕೊಟ್ಟಿದ್ದರು. ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಈ ಸಂದರ್ಭದಲ್ಲಿ ಹಾಲಕ್ಕಿ ಸಮುದಾಯದ ಮುಖಂಡರು, ಮಾಜಿ ಶಾಸಕ ಕೆ ಎಚ್ ಗೌಡ, ಜಿ.ಪಂ ಮಾಜಿ ಸದಸ್ಯ ಜಿ ಎಂ ಶೆಟ್ಟಿ, ಹನುಮಂತ ಗೌಡ, ಪುರುಷೋತ್ತಮ ಗೌಡ, ಸುಜಾತ ಗಾಂವಕರ, ಶ್ರೀಧರ ಗೌಡ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ನಾಗರಿಕರು ನೆರೆದಿದ್ದರು.
ಇದನ್ನು ಓದಿ : ಬಾರದ ಲೋಕಕ್ಕೆ ಪಯಣಿಸಿದ ನಾಡಿನ ಸಸ್ಯವಿಜ್ಞಾನಿ, ಪದ್ಮಶ್ರೀ ತುಳಸಿ ಗೌಡ