ಮಂಗಳೂರು : ನಗರದ ಉರ್ವ (URVA) ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ನಡೆಸಿ ಪರಾರಿಯಾಗಿದ್ದ ತಂಡಕ್ಕೆ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಧ್ಯಪ್ರದೇಶ ಮೂಲದ ರಾಜು , ಸಿಂಗ್ವಾನಿಯ, ಮಯೂರ್, ಬಾಲಿ, ವಿಕ್ಕಿ ಎಂದು ಬಂಧಿತರಾಗಿದ್ದಾರೆ.

ಬೆಳಗ್ಗಿನ ಜಾವದ ಸುಮಾರಿಗೆ ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ ನಾಲ್ವರು ಯುವಕರು ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ ವಿಕ್ಟರ್ ಮೆಂಡೋನ್ಸಾ ಎನ್ನುವವರ ಮನೆಯ ಕಿಟಕಿಯ ಗ್ರಿಲ್ ತುಂಡರಿಸಿ ಒಳ ನುಗ್ಗಿದ್ದರು. ವಿಕ್ಟರ್ ಮೆಂಡೋನ್ಸಾ ರವರಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ತೀವ್ರ ಗಾಯವನ್ನುಂಟು ಮಾಡಿದ್ದರು. ಅವರ ಪತ್ನಿ ಶ್ರೀಮತಿ ಪ್ಯಾಟ್ರಿಸಿಯಾ ಮೆಂಡೋನ್ಸ ರವರಿಗೆ ಕೂಡಾ ಸ್ಕ್ರೂ ಡ್ರೈವರ್ ನಿಂದ ಹೊಡೆದು ಬೊಬ್ಬೆ ಹಾಕದಂತೆ ಹಾಗೂ ಫೋನ್ ಮಾಡದಂತೆ ಬೆದರಿಸಿದ್ದರು. ಬಳಿಕ ಮನೆಯಲ್ಲಿದ್ದ 3 ಮೊಬೈಲ್ ಫೋನ್ ಗಳನ್ನು ನೆಲಕ್ಕೆ ಬಡಿದು ಜಖಂಗೊಳಿಸಿ ಕಪಾಟಿನ ಲಾಕರ್ ಒಳಗೆ ಇರಿಸಿದ್ದ ಸುಮಾರು 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ಮತ್ತು ರೂ 1 ಲಕ್ಷ ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, ರೂ 3೦೦೦/- ನಗದು ಹಣವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಮಂಗಳೂರು ಪೊಲೀಸರು (MANGLORE POLICE) 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
 
ಕಳ್ಳರು ಕಾರಿನೊಂದಿಗೆ ಪರಾರಿಯಾಗಿದ್ದ ಮಾಹಿತಿಯನ್ನು ನಗರ ನಿಸ್ತಂತು ಕೊಠಡಿಗೆ ನೀಡಿದ್ದು, ಮುಲ್ಕಿ ಬಸ್ ನಿಲ್ದಾಣದ (MULKI BUS STAND) ಸಮೀಪ ನಿಲ್ಲಿಸಿದ್ದ ಕಳವು ಮಾಡಲ್ಪಟ್ಟ ಸದರಿ ಕಾರನ್ನು ಪತ್ತೆಮಾಡಿ ವಶಕ್ಕೆ ಪಡೆದರು. ಸ್ಥಳದ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಸರ್ಕಾರಿ ಬಸ್ಸಿನಲ್ಲಿ ಆರೋಪಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಗೊತ್ತಾಯಿತು.

ಕೆ ಎಸ್ ಆರ್ ಟಿ ಸಿ ಅಧಿಕಾರಿಗಳನ್ನು ಸಂಪರ್ಕಿಸಿ, ಬೆಳಗಿನ ಜಾವ ಮುಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಬಸ್ಗಳ ಮಾಹಿತಿ ಪಡೆದು. ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ಬಂದ ಒಂದು ಬಸ್ಸಿನ ನಿರ್ವಾಹಕರು ಅವರ ಬಸ್ಸಿನಲ್ಲಿ ಮುಲ್ಕಿಯಿಂದ 4 ಜನರು ಒಟ್ಟಿಗೆ ಪ್ರಯಾಣಿಸಿದ ಮಾಹಿತಿ ತಿಳಿಸಿದ್ದು ಆ ವ್ಯಕ್ತಿಗಳು ಅವರಲ್ಲಿ ಬೆಂಗಳೂರಿಗೆ ಹೋಗುವ ಬಸ್ಸಿನ ಬಗ್ಗೆ ಮಾಹಿತಿ ಕೇಳಿದ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ರವಾನಿಸಿ ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿಗಳ ತಂಡ ಸಕಲೇಶಪುರ ಸಮೀಪ ಬಸ್ಸನ್ನು ತಡೆದು ನಿಲ್ಲಿಸಿ ಅದರಲ್ಲಿ ಪ್ರಯಾಣಿಸುತ್ತಿದ್ದ 4 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಅವರು ಕೃತ್ಯವೆಸಗಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಅಲ್ಲದೆ ಕದ್ದ ಎಲ್ಲಾ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್ ಗಳು ಹಾಗೂ ಹಣವನ್ನು ಉರ್ವಾ ಪೊಲೀಸ್ ವಶಕ್ಕೆ ಪಡೆದಿದ್ದಾರೆ.