ಕಾರವಾರ(KARWAR) : ಚಿತ್ರನಟ ದರ್ಶನ್ (ACTOR DARSHAN)ಗೆ ಪರಪ್ಪನ ಅಗ್ರಹಾರ (PARAPPANA AGRAHAR) ಜೈಲಿನಲ್ಲಿ ರಾಜಾಥಿತ್ಯ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜೈಲುಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದರಿಂದ ಜೈಲಿನಲ್ಲಿರುವ ವಿಚಾರಣಾಧೀನ ಖೈದಿಗಳು(PRISONERS) ಕಂಪಿಸಿದ್ದಾರೆ.
150 ವರ್ಷಗಳ ಇತಿಹಾಸ ಹೊಂದಿರುವ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ (KARWAR DISTRICT JAIL) ಖೈದಿಗಳಿಬ್ಬರು ರಂಪಾಟ ಮಾಡಿದ್ದಾರೆ. ತಮಗೆ ಕೆಲವೊಂದು ವಸ್ತುಗಳು ಬೇಕು ಎಂದು ಜೈಲು ಸಿಬ್ಬಂದಿಗಳೊಂದಿಗೆ ಜಗಳ ಆಡಿದ್ದಾರೆ. ಅಲ್ಲದೇ ಕಲ್ಲಿನಿಂದ ತಮ್ಮ ತಮ್ಮ ಹಣೆಗೆ ಜಜ್ಜಿಕೊಂಡು ಗಾಯ ಮಾಡಿಕೊಂಡಿದ್ದಾರೆ.
ದಾಂಡೇಲಿಯ (DANDELI) ಗಾಂಜಾ ಕೇಸ್ ನಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಫರಾನ್ ಛಬ್ಬಿ ಮತ್ತು ಕಳ್ಳತನ ಪ್ರಕರಣದಲ್ಲಿ ಜೈಲು ವಾಸದಲ್ಲಿದ್ದ ಮುಜಾಮಿಲ್ ರಂಪಾಟ ನಡೆಸಿದವರು. ಇವರಿಬ್ಬರ ಗಲಾಟೆಯಿಂದ ಜೈಲಿನ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ .
ಮಾದಕ ವ್ಯಸನಕ್ಕೊಳಗಾದ ಇಬ್ಬರು ತಮಗೆ ತಂಬಾಕು ಬೇಕೆಂದು ತಗಾದೆ ತೆಗೆದಿದ್ದಾರೆ. ಅಲ್ಲದೇ ತಮಗೆ ನೋಡಲು ಟಿವಿ ವ್ಯವಸ್ಥೆ ಆಗಬೇಕೆಂದು ಪಟ್ಟು ಹಿಡಿದಿದ್ದರು. ಜೈಲು ಸಿಬ್ಬಂದಿಗಳು ನಿರಾಕರಿಸಿದ್ದಕ್ಕೆ ಕಲ್ಲಿನಿಂದ ಜಜ್ಜಿಕೊಂಡಿದ್ದಾರೆ.
ಗಾಯಗೊಂಡ ಇಬ್ಬರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಒಯ್ಯುವ ಸಂದರ್ಭದಲ್ಲಿ ಇಬ್ಬರು ಸಹ ತಮಗೆ ಜೈಲಿನಲ್ಲಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಆದರೆ ಜೈಲಿಗೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಅಲ್ಲಿನ ಸಿಸಿಟಿವಿ ಪರಿಶೀಲಿಸಿ ಅವರೇ ಗಾಯ ಮಾಡಿಕೊಂಡಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ
ಸದ್ಯ ಕಾರವಾರ ಜೈಲಿನಲ್ಲಿ ಮೂವರು ಮಹಿಳಾ ಖೈದಿಗಳು ಸೇರಿ 140 ರಷ್ಟು ವಿಚಾರಣಧೀನ ಖೈದಿಗಳಿದ್ದಾರೆ. ಸದ್ಯ ಗಲಾಟೆ ಶಾಂತವಾಗಿದೆ ಎಂದು ಆಡಿಷನಲ್ ಎಸ್ಪಿ ಸಿ ಟಿ ಜಯಕುಮಾರ್ ತಿಳಿಸಿದ್ದಾರೆ.
ಇದನ್ನು ಓದಿ : ದ್ವೀಪದಲ್ಲಿ ಸಿಲುಕಿದ ವ್ಯಕ್ತಿ ರಕ್ಷಣೆ