ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ಸಾಮಾಜಿಕ ಜಾಲತಾಣದಲ್ಲಿ(Social Media) ಲೈಕ್ಸ್ ಮತ್ತು ಫಾಲೋವರ್ಸ್ ಹುಚ್ಚಿಗೆ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದ ಚಾಲಕನ ವಿರುದ್ಧ ದಾಂಡೇಲಿ(Dandeli) ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿ, ಕ್ರೂಸರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಜೋಯಿಡಾ(Joida) ತಾಲೂಕಿನ ಪ್ರಧಾನಿ ಗ್ರಾಮದ(Pradhani Village) ಇನ್ಫಿನಿಟಿ ಹೋಂಸ್ಟೇ ಬಳಿ ತೂಫಾನ್ ಕ್ರೂಸರ್ ವಾಹನದ ಚಾಲಕ (KA-24/A-0450) ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ಅಪಾಯಕಾರಿ ಸಾಹಸ ಮಾಡಿದ್ದಾನೆ. ವಾಹನದ ಬಾನೆಟ್ ಮತ್ತು ಮೇಲ್ಛಾವಣಿಯ ಮೇಲೆ ಸುಮಾರು 12 ಜನರನ್ನು ಕುಳ್ಳಿರಿಸಿಕೊಂಡು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದಾನೆ.
ಅಪಾಯಕಾರಿ ದೃಶ್ಯವನ್ನು ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್ (Instragram) ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಈ ವಿಡಿಯೋ ದಾಂಡೇಲಿ(Dandeli) ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸುಭಾಷ ಸಾಲಮಂಟಪ ಅವರ ಗಮನಕ್ಕೆ ಬಂದಿತ್ತು. ಅವರು ನೀಡಿದ ದೂರಿನನ್ವಯ ಚಾಲಕನ ವಿರುದ್ಧ ನೂತನ ಬಿ.ಎನ್.ಎಸ್ ಕಾಯ್ದೆಯಡಿ() ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪಿಎಸ್‌ಐ ಶಿವಾನಂದ ನಾವದಗಿ ಅವರು ಮುಂದಿನ ತನಿಖೆ ಕೈಗೊಂಡಿದ್ದು, ವಶಪಡಿಸಿಕೊಂಡ ವಾಹನವನ್ನು ಠಾಣೆಯಲ್ಲಿ ನಿಲ್ಲಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ(Social Media) ಜನಪ್ರಿಯತೆಗಾಗಿ ಇಂತಹ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
