ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar) : ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಗೆಲುವಿಗಾಗಿ ಅಹಿಂದ ಪಡೆ ಭರ್ಜರಿ ರಣತಂತ್ರ ರೂಪಿಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ, ಅಹಿಂದದ ಪ್ರಬಲ ನಾಯಕರಾದ ಸತೀಶ್ ಜಾರಕಿಹೊಳಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಚಾರ ಚುರುಕುಗೊಂಡಿದೆ.
ಕುಬೇರಪ್ಪ ನೇತೃತ್ವದಲ್ಲಿ ಅಹಿಂದದಿಂದ ಮನೆ ಮನೆ ಮತಯಾಚನೆ ಬಿರುಸುಗೊಂಡಿದೆ. ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪದವೀಧರರ ಸಮಾವೇಶದಲ್ಲಿ ಅಹಿಂದ ನಾಯಕರು ಹಾಗೂ ಕೆಪಿಸಿಸಿ ಶಿಕ್ಷಕರು ಮತ್ತು ಪದವೀಧರ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಡಾ. ಆರ್. ಎಂ. ಕುಬೇರಪ್ಪನವರು ಮೋಹನ ಲಿಂಬಿಕಾಯಿ ಅವರ ಪರವಾಗಿ ಬೃಹತ್ ಮತಯಾಚನೆ ಮಾಡುತ್ತಿದ್ದಾರೆ.
ಅಹಿಂದ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಮನೆಗೆ ಮತ್ತು ಶಿಕ್ಷಣ ಸಂಸ್ಥೆಗಳು ಜೊತೆಗೆ ಬ್ಯಾಂಕಿಂಗ್ ವಲಯಗಳಿಗೆ ಬೆಂಬಲಿಗರೊಂದಿಗೆ ಭೇಟಿ ನೀಡುತ್ತಿರುವ ಡಾ. ಆರ್. ಎಂ. ಕುಬೇರಪ್ಪನವರು -“ನಮ್ಮ ನೆಚ್ಚಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರು ಅಹಿಂದ ಸಮುದಾಯಕ್ಕೆ ನೀಡಿದ ಭರವಸೆಯಂತೆ, ಈ ಬಾರಿ ಪದವೀಧರ ಕ್ಷೇತ್ರವನ್ನು ಗೆಲ್ಲಲೇಬೇಕು. ನಮ್ಮ ಅಹಿಂದದ ಹೆಮ್ಮೆಯ ನಾಯಕರು, ಲೋಕೋಪಯೋಗಿ ಸಚಿವರಾದ ಮಾನ್ಯ ಸತೀಶ್ ಜಾರಕಿಹೊಳಿ ಅವರು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್ ಅವರ ಸಂಪೂರ್ಣ ಬೆಂಬಲ ನಮ್ಮ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರಿಗಿದೆ. “ಮೋಹನ ಲಿಂಬಿಕಾಯಿ ಅವರು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಪದವೀಧರರ, ಶಿಕ್ಷಕರ, ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗಾಗಿ ಪ್ರಾಮಾಣಿಕವಾಗಿ ಹೋರಾಡಿದ್ದಾರೆ. ಅವರು ನಮ್ಮ ಧ್ವನಿ. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಈ ಸಂದರ್ಭದಲ್ಲಿ, ಅವರನ್ನು ಗೆಲ್ಲಿಸಿದರೆ ಅತಿಥಿ ಉಪನ್ಯಾಸಕರ ಖಾಯಂ ಸೇರಿದಂತೆ ಪದವೀಧರರ ಎಲ್ಲಾ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ” ಎಂದು ಹೇಳಿದರು.
“ಆದ್ದರಿಂದ ನನ್ನ ಎಲ್ಲಾ ಅಹಿಂದ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಪದವೀಧರ ಬಂಧುಗಳು ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ಮೋಹನ ಲಿಂಬಿಕಾಯಿ ಅವರಿಗೆ ನೀಡಿ, ಭಾರಿ ಬಹುಮತದಿಂದ ಗೆಲ್ಲಿಸಬೇಕು” ಎಂದು ಡಾ. ಆರ್. ಎಂ. ಕುಬೇರಪ್ಪನವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನೂರಾರು ಅಹಿಂದ ಕಾರ್ಯಕರ್ತರು, ಅತಿಥಿ ಉಪನ್ಯಾಸಕರು, ಪದವೀಧರರು ಡಾ.ಆರ್ ಎಮ್ ಕುಬೇರಪ್ಪನವರೇ ಸ್ಪರ್ಧೆಯಲ್ಲಿ ಇದ್ದಾರೆಂಬಂತೆ ಪ್ರಚಾರ ಕೈಗೊಂಡಿರುವದು ಅತೀವ ಸಂತಸ ತಂದಿದೆ ಎಂದು ಡಾ. ಆರ್. ಎಂ. ಕುಬೇರಪ್ಪ ನಿಕಟಪೂರ್ವ ರಾಜ್ಯಾಧ್ಯಕ್ಷರು, ಕೆಪಿಸಿಸಿ ಶಿಕ್ಷಕರು ಹಾಗೂ ಪದವೀಧರ ಘಟಕಹಾಗೂ ಅಹಿಂದ ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.