ಬೆಂಗಳೂರು: ಅಂತೂ ಇಂತೂ  ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಿಂಗಳ ಬಳಿಕ ಕೊನೆಗೂ ವಿಡಿಯೋ ಸಂದೇಶದ ಮೂಲಕ ಪ್ರತ್ಯಕ್ಷರಾಗಿದ್ದಾರೆ. ತಮ್ಮ ಅಜ್ಜ ಎಚ್ ಡಿ ದೇವೇಗೌಡ ಅವರ ಮಾತಿಗೆ ಮಣಿದಿದ್ದಾರೆ. ಮೇ 31ರಂದುಬೆಳಿಗ್ಗೆ ಎಸ್ಐಟಿ ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಈಗ ವಿದೇಶದಲ್ಲಿದ್ದುಕೊಂಡು 2.20 ನಿಮಿಷಗಳ ವಿಡಿಯೋ ಮೆಸೇಜ್ ನ್ನ ಬಿಡುಗಡೆಗೊಳಿಸಿದ್ದಾರೆ. ಅದರಲ್ಲಿ ತಾನು ವಿದೇಶಕ್ಕೆ ತೆರಳುವುದು ಮೊದಲೇ ನಿರ್ಧಾರವಾಗಿತ್ತು ಎಂದು ಹೇಳಿಕೊಂಡಿದ್ದು ನಾನು ವಿದೇಶದಲ್ಲಿ ಎಲ್ಲಿದ್ದೇನೆ ಎಂದು ಮಾಹಿತಿ ನೀಡದಿರುವುದಕ್ಕೆ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ನಾನು ಮತದಾನ ಮಾಡಿ ವಿದೇಶಕ್ಕೆ ಹೋಗುವ ದಿನ ನನ್ನ ಮೇಲೆ ಯಾವುದೇ ಪ್ರಕರಣವೂ ದಾಖಲಾಗಿರಲಿಲ್ಲ. ಎಸ್‌ಐಟಿ ಕೂಡ ರಚನೆ ಆಗಿರಲಿಲ್ಲ. ಏ.26ರಂದು ನಾನು ವಿದೇಶಕ್ಕೆ ಹೋಗುವುದು ಕೂಡ ಪೂರ್ವ ನಿರ್ಧರಿತವಾಗಿರುತ್ತದೆ. ವಿದೇಶದಲ್ಲಿ ಉಳಿದುಕೊಂಡು ಮೂರ್ನಾಲ್ಕು ದಿನದ ಬಳಿಕ ಯೂಟ್ಯೂಬ್‌ನಲ್ಲಿ ನ್ಯೂಸ್ ಚಾನೆಲ್ ನೋಡುವ ವೇಳೆ ಈ ಮಾಹಿತಿ ನನಗೆ ಗೊತ್ತಾಗಿದೆ. ಇದಾದ ನಂತರ ಎಸ್ಐಟಿ ಕೂಡ ನನಗೆ ನೋಟಿಸ್ ಕೊಡುವ ಕೆಲಸ ಮಾಡಿತು. ಎಸ್‌ಯಟಿ ನೋಟಿಸ್‌ಗೆ ಎಕ್ಸ್‌ ಖಾತೆ ಮತ್ತು ನಮ್ಮ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಲು 7ಏಳು ದಿನಗಳ ಕಾಲಾವಕಾಶ ಕೇಳಿದ್ದೆ. ಈ ಸಮಯದಲ್ಲಿ ರಾಜಕೀಯ ನಾಯಕರು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದರು ಇದರಿಂದ ನಾನೂ ಡಿಪ್ರೆಶನ್‌ಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ
ರಾಜಕೀಯವಾಗಿ ನಾನು ಬೆಳೆಯುತ್ತಿರುವುದನ್ನು ಸಹಿಸದ ಕೆಲ ಶಕ್ತಿಗಳು ನನ್ನ ವಿರುದ್ಧ ಪಿತೂರಿ ಮಾಡಿ ಈ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಅಜ್ಜ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪತ್ರ, ಕುಮಾರಸ್ವಾಮಿ ಅವರ ಮನವಿಯ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್ ರೇವಣ್ಣ, ತಂದೆ-ತಾಯಿ, ತಾತನಿಗೆ ಕ್ಷಮೆಕೋರುತ್ತೇನೆ, ಜನತೆ, ಜೆಡಿಎಸ್ ಕಾರ್ಯಕರ್ತರಿಗೂ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ವಿಷಯವನ್ನು ವಿಡಿಯೋ ಸಂದೇಶದಲ್ಲಿ ಪ್ರಸ್ತಾಪಿಸಿಲ್ಲ.