ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕುಮಟಾ(Kumta) : ಪ್ರವಾಸಕ್ಕೆಂದು ಬಂದು ಸಮುದ್ರದಲ್ಲಿ ಈಜಾಡುತ್ತಿದ್ದಾಗ ನೀರಿನ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಸ್ಥಳೀಯ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಹಾಗೂ ಲೈಫ್‌ಗಾರ್ಡ್‌ಗಳು ಸಮಯಪ್ರಜ್ಞೆ ಮೆರೆದು ಸಕಾಲದಲ್ಲಿ ರಕ್ಷಿಸಿರುವ ಘಟನೆ ಕುಮಟಾ ತಾಲೂಕಿನ ಪ್ರಸಿದ್ಧ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ನಡೆದಿದೆ.
ಬೆಂಗಳೂರು(Banglore) ಮೂಲದ ಹರಿಬಾಬು ಎಂ. ಹಾಗೂ ಚೆಲುವರಾಜ್ ರಕ್ಷಿಸಲ್ಪಟ್ಟ ಪ್ರವಾಸಿಗರು. ಬೆಂಗಳೂರಿನಿಂದ ಮೂವರು ಸ್ನೇಹಿತರು ರಜೆಯ ಮೋಜಿಗಾಗಿ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಕುಡ್ಲೆ ಬೀಚ್‌ನಲ್ಲಿ(Kudle Beach) ನೀರಿಗಿಳಿದು ಈಜಾಡುತ್ತಿದ್ದಾಗ, ಹರಿಬಾಬು ಹಾಗೂ ಚೆಲುವರಾಜ್ ಹಠಾತ್ತಾಗಿ ಸಮುದ್ರದ ಬಲವಾದ ಅಲೆ ಮತ್ತು ನೀರಿನ ಸುಳಿಗೆ ಸಿಲುಕಿ ದಡದಿಂದ ದೂರಕ್ಕೆ ಕೊಚ್ಚಿ ಹೋಗಲು ಪ್ರಾರಂಭಿಸಿದ್ದಾರೆ.
ಈ ವೇಳೆ ಅವರು ಆಪತ್ತಿನಲ್ಲಿರುವುದನ್ನು ತಕ್ಷಣ ಗಮನಿಸಿದ ‘ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್’ (Mystic Gokarna Adventure Water Sports) ಸಿಬ್ಬಂದಿ ಸಮಯ ವ್ಯರ್ಥ ಮಾಡದೇ ವಾಟರ್ ಬೈಕ್ (Jet Ski) ಮೂಲಕ ತಕ್ಷಣ ನೀರಿಗಿಳಿದಿದ್ದಾರೆ. ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನೂ ವಾಟರ್ ಬೈಕ್ ಲ್ಲಿ ಸುರಕ್ಷಿತವಾಗಿ ದಡಕ್ಕೆ ತಂದು ಜೀವ ರಕ್ಷಿಸಿದ್ದಾರೆ.
ಈ ಸಾಹಸಮಯ ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯ ಲೈಫ್‌ಗಾರ್ಡ್ (Lifeguard) ಸಿಬ್ಬಂದಿ ಕೂಡ ಸಂಪೂರ್ಣ ಸಹಕಾರ ನೀಡಿದ್ದಾರೆ. ಪ್ರವಾಸಿಗರ ಜೀವ ಉಳಿಸಿದ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಮತ್ತು ಲೈಫ್‌ಗಾರ್ಡ್‌ಗಳ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.