ಕಾರವಾರ : ಅನುದಾನಿತ ಪ್ರೌಢಶಾಲೆಗಳ ಸಿಬ್ಬಂದಿ ಹಾಗೂ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಉತ್ತರಕನ್ನಡ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿದೆ.

ನಗರದ ಹಿಂದು ಹೈಸ್ಕೂಲ್ ಎದುರಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಶಿಕ್ಷಕರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬಸವರಾಜ ಹೊರಟ್ಟಿಯವರ ನೇತೃತ್ವದಲ್ಲಿ ಅನುದಾನಿತ ಪ್ರೌಢಶಾಲೆಗಳ ಸಿಬ್ಬಂದಿ ಹಾಗೂ ಶಿಕ್ಷಣ ಸಂಸ್ಥೆಗಳ ಬೇಡಿಕೆ ಈಡೇರಿಸಲು ಹಲವಾರು ಬಾರಿ ರಾಜ್ಯ, ಜಿಲ್ಲಾ ಮತ್ತು ತಾಲೂಕಾ ಹಂತದಲ್ಲಿ ಸರದಿ ಉಪವಾಸ ಸತ್ಯಾಗ್ರಹ, ಪಾದಯಾತ್ರೆ, ಬೆಂಗಳೂರು ಚಲೋ ಪ್ರತಿಭಟನೆಗಳನ್ನು ಮಾಡುವುದರ ಮೂಲಕ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿ ಸರಕಾರದ ಗಮನ ಸೆಳೆದರೂ ಇಲ್ಲಿಯವರೆಗೆ ನಮ್ಮ ಯಾವುದೇ ನ್ಯಾಯಸಮ್ಮತವಾದ ಬೇಡಿಕೆಗಳು ಈಡೇರಿಲ್ಲ.  ಅನುದಾನಿತ ನೌಕರರಿಗೆ ಹೊಸ ಹೊಸ ಸಮಸ್ಯೆಗಳು ಸೃಷ್ಟಿಯಾಗುವುದರ ಮೂಲಕ ನೌಕರರನ್ನು ಹೈರಾಣಗೊಳಿಸಿವೆ. 2006 ರ ನಂತರ ನೇಮಕವಾದ ಅನುದಾನಿತ ಸಿಬ್ಬಂದಿಗಳಿಗೆ ಹೊಸ ಪಿಂಚಣಿ ವ್ಯವಸ್ಥೆ ಕೂಡ ಜಾರಿಯಾಗಿರುವುದಿಲ್ಲ. ಹಲವಾರು ಸಿಬ್ಬಂದಿಗಳು ಕೊನೆಯ ಸಂಬಳದೊಂದಿಗೆ ನಿವೃತ್ತಿ ಹೊಂದಿದ್ದಾರೆ. ಸಂಧ್ಯಾಕಾಲದಲ್ಲಿ ಹಸನವಾಗಬೇಕಾದ ಅವರ ಬದುಕು ದುಸ್ತರವಾಗಿದೆ. ಇಳಿ ವಯಸ್ಸಿನಲ್ಲಿ ಹಲವಾರು ನೌಕರರು ತಮ್ಮ ಉಪಜೀವನಕ್ಕಾಗಿ ಬೇರೆ ಬೇರೆ ಉದ್ಯೋಗಗಳಲ್ಲಿ ನಿರತರಾಗಿದ್ದಾರೆ.

ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಆರಂಭಿಸಿದ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗಳಿಲ್ಲದೇ 2015 ರಿಂದ ಇಲ್ಲಿಯವರೆಗೆ ಹಲವಾರು ಹುದ್ದೆಗಳು ಖಾಲಿ ಇದ್ದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಹೇಗೆ ಸಾಧ್ಯ ಅನ್ನುವ ಪ್ರಶ್ನೆ ಆಡಳಿತ ಮಂಡಳಿಯನ್ನು ಕಾಡುತ್ತಿದೆ. ಜೊತೆಗೆ ಅನುದಾನಿತ ನೌಕರರಿಗೆ ಜ್ಯೋತಿ ಸಂಜೀವಿನಿಯು ಕೂಡ ಮರಿಚಿಕೆಯಾಗಿದೆ. ಮಾನ್ಯರು ಈ ಮನವಿಯನ್ನು ಪುರಸ್ಕರಿಸಿ ನಮ್ಮ ಕೆಳಕಂಡ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಅವುಗಳನ್ನು ಈಡೇರಿಸಬೇಕಾಗಿ ವಿನಂತಿಸಿದ್ದಾರೆ.

ಬೇಡಿಕೆಗಳು : 2006 ರ ನಂತರ ನೇಮಕವಾದ ಅನುದಾನಿತ ಹಾಗೂ ಸರಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದು. 2006 ಕ್ಕಿಂತ ಪೂರ್ವದಲ್ಲಿ ಇಲಾಖೆಯಿಂದ ಪರವಾನಿಗೆ ಪಡೆದು ನೇಮಕವಾದ ಅನುದಾನಿತ ನೌಕರರಿಗೆ ಸರಕಾರಿ ನೌಕರರಿಗೆ ಜಾರಿಗೊಳಿಸುವಂತೆ ಹಳೆ ಪಿಂಚಣಿ ಯೋಜನೆಗೆ ಒಳಪಡಿಸುವುದು.  2015 ರ ನಂತರ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಹುದ್ದೆ ಭರ್ತಿ ಮಾಡುವುದು. ಜ್ಯೋತಿ ಸಂಜೀವಿನಿ ಯೋಜನೆ ಜಾರಿ ಕುರಿತು. ಶ್ರೀ ಬಸವರಾಜ ಹೊರಟ್ಟಿಯವರ ಕಾಲ್ಪನಿಕ ವೇತನ ವರದಿ ಯಥಾವತ್ತಾಗಿ ಜಾರಿಗೊಳಿಸುವುದು.  1995 ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡುವುದು. ಅನುದಾನಿತ ಶಾಲೆಗಳಲ್ಲಿ ಆಡಳಿತ ಮಂಡಳಿಯಿಂದ ನೇಮಕವಾಗಿ ಈಗಾಗಲೇ ಇಲಾಖೆಯಿಂದ ಗುರುತಿಸಿ ಆರ್ಥಿಕ ಇಲಾಖೆ ಅನುಮೋದನೆಗೆ ಸಲ್ಲಿಸಿರುವ ಡಿ ನೌಕರರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವುದು.  7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ ಬಿ. ಬಂಟ, ಪ್ರ.ಕಾರ್ಯದರ್ಶಿ ಎಲ್.ಎಂ.ಹೆಗಡೆ,  ಜಿಲ್ಲಾ ಸಂಚಾಲಕ ಎಂ.ಟಿ.ಗೌಡ, ಅಂಕೋಲಾ ತಾಲೂಕು ಅಧ್ಯಕ್ಷ  ಜಿ.ಆರ್. ನಾಯಕ, ಹೊನ್ನಾವರ ತಾಲೂಕಾ ಅಧ್ಯಕ್ಷ ಸಂತೋಷ ನಾಯ್ಕ, ಕುಮಟಾ ತಾಲೂಕಾ ಅಧ್ಯಕ್ಷ ಅನಿಲ ರೊಡ್ರಿಗಸ್, ಭಟ್ಕಳ ತಾಲೂಕಾ ಘಟಕ ಅಧ್ಯಕ್ಷ ಶಬ್ದರ್ ದಫೇದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.