ಕುಮಟಾ : ಸಾಮಾನ್ಯವಾಗಿ ಬೇಸಿಗೆ ವೇಳೆ ನೀವು ಉತ್ತರಕನ್ನಡ ಜಿಲ್ಲೆಯ ಕುಮಟಾ ಕಡೆ ಸಂಚಾರಿಸಿದರೆ ನಿಮಗೆ ಸಿಹಿ ಈರುಳ್ಳಿ (sweet onion) ಪರಿಚಯವಾಗುತ್ತದೆ. ಹೌದು. ಕಳೆದ ಹಲವು ವರ್ಷಗಳಿಂದ ಕರಾವಳಿಯ ಈ ಭಾಗದಲ್ಲಿ ವಿಶಿಷ್ಟವಾಗಿರುವ ತರಹದ ಈರುಳ್ಳಿ ಬೆಳೆಯಲಾಗುತ್ತಿದೆ. ಸ್ಥಳೀಯರಿಗೆ ಮಾತ್ರ ಇದರ ಪರಿಚಯವಿದೆ. ಆದರೆ ಹೊರಗಡೆ ಜಗತ್ತಿಗೆ ಮಾತ್ರ ಹೆಚ್ಚಾಗಿ ಇದರ ಬಗ್ಗೆ ಗೊತ್ತಿಲ್ಲ.
ಕುಮಟಾ ತಾಲೂಕಿನ ವನ್ನಳ್ಳಿ, ಅಳ್ವೆಕೋಡಿ ಮತ್ತು ಹಂದಿಗೋಣ ಭಾಗದಲ್ಲಿ ಮಾತ್ರ ಈ ಬೆಳೆ ಬೆಳೆಯಲಾಗುತ್ತಿದೆ. ಕಡಲತೀರದಿಂದ ಸುಮಾರು ಒಂದರಿಂದ ಒಂದೂವರೆ ಕಿಲೋಮೀಟರ್ ದೂರದ ಉಪ್ಪು ಮಿಶ್ರಿತ ಮಣ್ಣಿನಲ್ಲಿ ಮಾತ್ರ ಸಿಹಿ ಈರುಳ್ಳಿ ಬೆಳೆಯುತ್ತೆ. ಪ್ರತಿವರ್ಷವೂ ಮುಂಗಾರು ಮುಗಿದ ಬಳಿಕ ರೈತರು ಸಿಹಿ ಈರುಳ್ಳಿಯನ್ನ ಬೆಳೆಯುತ್ತಾರೆ.
ಅನೇಕ ಸವಾಲುಗಳ ನಡುವೆ ತುಂಬಾ ಶ್ರಮಪಟ್ಟರೆ ಮಾತ್ರ ಸಿಹಿಸಿಹಿಯಾದ ಈರುಳ್ಳಿ ಕೈಗೆ ಸಿಗುತ್ತದೆ. ಕೆಂಪು ಮತ್ತು ಬಿಳಿ ಬಣ್ಣದ ಈರುಳ್ಳಿ ಪ್ರತಿ ವರ್ಷವೂ ಕುಮಟಾ ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿ ಕಾಣಸಿಗುತ್ತದೆ. ಇದರ ರುಚಿ ಮಾತ್ರ ಬಲ್ಲವನೆ ಬಲ್ಲ. ಇಲ್ಲಿ ಸಿಗುವ ಸಿಹಿ ಈರುಳ್ಳಿ ಆರೋಗ್ಯಕ್ಕೆ ದಿವ್ಯ ಔಷಧಿಯಾಗಿದೆ.
ಥಂಡಿ, ಕೆಮ್ಮು, ಕಫಕ್ಕೆ ಔಷಧಿಯಾಗಿ ಈ ಈರುಳ್ಳಿಯ ರಸ ಮಾಡಿ ಕುಡಿದರೆ ಕಡಿಮೆಯಾಗುತ್ತದೆ. ಇಲ್ಲಿ ಸಿಗುವ ಈರುಳ್ಳಿಯನ್ನ ಗ್ರಾಹಕರು ಕೊಂಡೊಯ್ದು ಮನೆಯಲ್ಲಿ ಶೇಖರಿಸಿಡುತ್ತಾರೆ. ಹಿಂದೆ ಮನೆಯ ಜಂತಿಯಲ್ಲಿ ನೇತು ಹಾಕಿ ವರ್ಷದವರೆಗೆ ಬಳಸುತ್ತಾರೆ. ಕುಮಟಾದ ಸಿಹಿ ಈರುಳ್ಳಿ ಆಹಾರ ಪದಾರ್ಥಕ್ಕೆ ಹೆಚ್ಚು ಬಳಸದೇ ನೇರವಾಗಿ ತಿನ್ನಬಹುದು. ಈ ಈರುಳ್ಳಿ ಖಾರವಾಗಿರದೇ ಸಿಹಿಸಿಹಿಯಾಗಿದೆ. ಆರೋಗ್ಯಕ್ಕೆ ಕುಮಟಾದ ಈ ಸಿಹಿ ಈರುಳ್ಳಿ ರಾಮಬಾಣವಾಗಿದೆ.
ಈ ಈರುಳ್ಳಿಯ ದರ ಉಳಿದ ಈರುಳ್ಳಿಗಿಂತ ಕೊಂಚ ಜಾಸ್ತಿ ಇದೆ. ಆದರೆ ದರ ನೋಡದೇ ಗ್ರಾಹಕರು ಕೊಂಡೋಯ್ಯುತ್ತಾರೆ.
ಈರುಳ್ಳಿಯಿಂದ ಆರೋಗ್ಯಕ್ಕೆ ಪ್ರಯೋಜನಗಳು :
ಅಡುಗೆ ಮನೆಯಲ್ಲಿ ಈರುಳ್ಳಿ ಇದ್ದರಷ್ಟೇ ಆ ಮನೆಯಲ್ಲಿ ಸ್ವಾದಿಷ್ಟ ಪದಾರ್ಥಗಳು ತಯಾರಾಗುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈರುಳ್ಳಿ ಹೆಲ್ಪ್ ಮಾಡುತ್ತದೆ.
ಈರುಳ್ಳಿಯಿಂದಲೇ ನಾನಾ ರೀತಿಯ ಅಡುಗೆ ತಯಾರಿಸಬಹುದು. ಸಲಾಡ್, ವೆಜ್ ಹಾಗೂ ನಾನ್ವೆಜ್ ಸಾಂಬಾರ, ಸ್ಯಾಂಡ್ ವಿಚ್, ಸೂಪ್ ಗಳು ಈರುಳ್ಳಿಯಿಂದಲೇ ತಯಾರಿಸಬಹುದು. ಒಟ್ಟಿನಲ್ಲಿ ಈರುಳ್ಳಿಯನ್ನು ಸೇವಿಸುವುದರಿಂದ ಜೀರ್ಣ ಕ್ರಿಯೆಯನ್ನು ಸರಿಯಾಗಿಟ್ಟುಕೊಳ್ಳಬಹುದು.
ನಮ್ಮಲ್ಲಿ ಹಸಿ ಈರುಳ್ಳಿಯನ್ನು ಹೆಚ್ಚಾಗಿ ಊಟದಲ್ಲಿ ನಿಂಬೆಹಣ್ಣಿನ ಜೊತೆ ಸೇವಿಸಲಾಗುತ್ತದೆ. ಓನಿಯನ್ ನಿಂದಲೇ ಹಲವು ಆರೋಗ್ಯ ಪ್ರಯೋಜನಗಳಿವೆ.

ಈರುಳ್ಳಿಯಲ್ಲಿ ವಿಟಮಿನ್ ಸಿ, ಬಿ ಜೀವಸತ್ವಗಳು ಮತ್ತು ಪೊಟ್ಯಾಸಿಯಮ್ ಸಿಗುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಈರುಳ್ಳಿ ಪ್ರಯೋಜನಕಾರಿಯಾಗಿದೆ. ಅಧ್ಯಯನಗಳ ಪ್ರಕಾರ, ಈರುಳ್ಳಿಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಮಧುಮೇಹ ಇರುವವರಿಗೆ ಸಹಾಯ ಮಾಡುತ್ತದೆ.