ಅಂಕೋಲಾ : ಸಹೋದರಿಬ್ಬರೂ ಕಷ್ಟಪಟ್ಟು ತಮ್ಮ ನೆಲಕ್ಕೆ ಅಪರೂಪವಾಗಿರುವ ಡ್ರ್ಯಾಗನ್ (Dragon Fruits)ಬೆಳೆ ಬೆಳೆದ ರೋಚಕ ಸ್ಟೋರಿ ಇದು.
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಮಣ್ಣಿನಲ್ಲಿ ಇವರೆಗೆ ಮಾವಿನ ಹಣ್ಣು, ಕಲ್ಲಂಗಡಿ, ಭತ್ತ, ಶೇಂಗಾ, ಹೀಗೆ ವಿವಿಧ ಬೆಳೆ ಬೆಳೆಯಲಾಗಿದೆ. ಈ ನಡುವೆ
ಸಗಡಗೇರಿಯಲ್ಲಿ ಸಹೋದರರಿಬ್ಬರು ಹೊಸ ಬೆಳೆಯತ್ತ ಲಕ್ಷ್ಯ ಹಾಕಿದ್ದಾರೆ. ಸಗಡಗೇರಿಯ ಬಿಕಾಂ. ಪದವಿಧರರಾಗಿರುವ ಸಗಡಗೇರಿಯ ವಿಘ್ನೇಶ ಹಾಗೂ ವಿತ್ತೇಶ ಸಹೋದರರು ಹೊಸ ಬೆಳೆಯ ಕೃಷಿ ಕಡೆ ಹೆಜ್ಜೆ ಹಾಕಿದವರು.
ಇಲ್ಲಿನ ಬಹುತೇಕ ಪ್ರದೇಶ ಬೆಟ್ಟ-ಬೇಣಗಳಿಂದ ಕೂಡಿದೆ. ಕಲ್ಲು-ಬಂಡೆಗಳಿಂದ ತುಂಬಿದ ಬರಡು ಭೂಮಿಯಲ್ಲಿ ಡ್ರ್ಯಾಗನ್ ಬೆಳೆಯುವುದು ಸುಲಭವಲ್ಲ. ಮಕ್ಕಳ ಕೃಷಿ ಸಾಧನೆಗೆ ಅಜ್ಜ ವೆಂಕಟರಾಯ್ ನಾಯಕ ಹಾಗೂ ತಂದೆ ಮಾರುತಿ ತಾಯಿ ಶ್ಯಾಮಲಾ ಸೇರಿದಂತೆ ಕುಟುಂಬದವರ ಪ್ರೋತ್ಸಾಹ ಸಿಕ್ಕಿದೆ.
ಡ್ರಾಗನ್ ಬೆಳೆಯಲು ವಿಗ್ನೇಶ್ ಹಾಗೂ ವಿತ್ತೇಶ ಅವರು ಬೆಂಗಳೂರು, ಕಾರ್ಕಳ, ದಾವಣಗೇರಿಯ ಚೆನ್ನಗಿರಿ ಸೇರಿದಂತೆ ತೆಲಂಗಾಣದಲ್ಲಿ ಬೆಳೆದ ತೋಟಗಳನ್ನು ಸುತ್ತಾಡಿ ಅವುಗಳ ಅಧ್ಯಯನ ನಡೆಸಿದ್ದರು. ತಮ್ಮೂರಲ್ಲಿ ಇದನ್ನ ಬೆಳೆಯಬೇಕೆಂದು ಹಂಬಲ ಕಂಡವರು. ಸಹೋದರರ ಸಂಕಲ್ಪದಂತೆ ಅವರ ಜಮೀನಿನಲ್ಲಿ ಅಪರೂಪದ ಡ್ರ್ಯಾಗನ್ ಬೆಳೆದು ನಿಂತಿದೆ.
ನೀವೇನಾದ್ರು ಇಲ್ಲಿಗೆ ಬಂದರೆ ದಕ್ಷಿಣ ಮೆಕ್ಸಿಕೋ, ಮಧ್ಯ ಅಮೇರಿಕಾ ಮೂಲದ ಡ್ರಾಗನ್ ತೋಟಕ್ಕೆ ಬಂದ ಅನುಭವವಾಗುತ್ತೆ. ಸಗಡಗೇರಿಯಲ್ಲಿರುವ ಸುಮಾರು ಒಂದೂವರೆ ಎಕರೆ ಬೇಣದ ಜಾಗದಲ್ಲಿ ತುಂಬಿದ್ದ ಕಲ್ಲಿನ ರಾಶಿ ಹಾಗೂ ಗಿಡ-ಗಂಟಿಗಳನ್ನು ತೆರವುಗೊಳಿಸಿ ನೆಲವನ್ನು ಸಮತಟ್ಟುಗೊಳಿಸಿಕೊಂಡಿದ್ದರು. ನಾಲ್ಕುನೂರು ಸಿಮೆಂಟ್ ಕಂಬಗಳನ್ನು ಬೇಣದಲ್ಲಿ ಹೂತು ಮೇಲ್ಭಾಗದಲ್ಲಿ ಕಬ್ಬಿಣದ ರಾಡ್ಗಳನ್ನು ಅಳವಡಿಸಿ ವಾಹನದ ಟೈಯರ್ ಜೋಡಿಸಿದ್ದರು. ಬೆಂಗಳೂರಿನಿಂದ ಫ್ರುಟ್ಸ್ ಗಿಡವನ್ನು ತರಿಸಿಕೊಂಡು,
1600 ಡ್ರ್ಯಾಗನ್ ಹಣ್ಣಿನ ಗಿಡ ನೆಟ್ಟಿದ್ದರು.
ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದ ಹಣ್ಣು
ರಾಸಾಯನಿಕ ಗೊಬ್ಬರವನ್ನು ಬಳಸಿದರೆ ಗಿಡಗಳ ಜೀವಿತಾವಧಿ ಕ್ಷೀಣಿಸಲಿದೆಯಂದರಿತು ಗಿಡ ನೆಡುವ ಮುನ್ನ ಅಡಿಭಾಗದಲ್ಲಿ ಕೊಟ್ಟಿಗೆ (ಸಗಣಿ) ಗೊಬ್ಬರ, ಹೊಂಗೆ-ಬೇವಿನ ಗೊಬ್ಬರ, ಎರೆಹುಳು ಗೊಬ್ಬರವನ್ನು ಎರೆದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಂಡಿದ್ದರು. ಹನಿ ನೀರಾವರಿ ಪದ್ಧತಿಯ ಮೂಲಕ ಸಕಾಲದಲ್ಲಿ ನೀರುಣಿಸಿದರು.
ಗೋಮೂತ್ರದಿಂದ ಸಿದ್ಧಗೊಳಿಸಿದ ಸಾವಯವ ಕೀಟನಾಶಕವನ್ನು ಬಳಸಿ ಗಿಡಗಳನ್ನು ಮಕ್ಕಳಂತೆ ಪೋಷಿದ್ದಾರೆ. ಸಮೃದ್ಧವಾದ ಸಾರವನ್ನು ಹೀರಿಕೊಂಡ ಗಿಡಗಳು ಅವಧಿಗೂ ಮುನ್ನವೇ ಮೊಗ್ಗರಳಿಸಿ ಮನೆಯವರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇದೀಗ ಸುಮಾರು. ಮೂರುವರೆ ಸಾವಿರದಷ್ಟು ಗಿಡಗಳು ಅರಳಿ ಹಣ್ಣಾಗುವ ಹಂತಕ್ಕೆ ಬಂದಿವೆ.
ಇನ್ನೂ ಕೆಲ ದಿನಗಳಲ್ಲಿ ಮೊದಲ ಬೆಳೆ ಕೈ ಸೇರಲಿವೆ. ಜಿಲ್ಲೆಯ ಹಾಗೂ ರಾಜ್ಯದಲ್ಲಿ ಮಾರುಕಟ್ಟೆಯನ್ನ ಸಗಡಗೇರಿಯ ಹಣ್ಣು ಪ್ರವೇಶಿಸಲಿದೆ. ಸಹೋದರರ ಕೃಷಿ ಕಾಯಕ ಸುತ್ತಮುತ್ತಲಿನ ಕೃಷಿಕರ ಗಮನ ಸೆಳೆಯುವಂತಾಗಿದೆ.
ತುಂಬಾ ಬೇಡಿಕೆ ಡ್ರ್ಯಾಗನ್ ಹಣ್ಣು :
ಡ್ರ್ಯಾಗನ್ ಹಣ್ಣಿಗೆ ತುಂಬಾ ಬೇಡಿಕೆ ಇದೆ. ಒಣ ಭೂಮಿಯಲ್ಲಿ ಬೆಳೆಯುವ ಬೆಳೆ. ಕ್ಯಾಕ್ಟಸ್ ಜಾತಿಗೆ ಸೇರಿರುವ ಡ್ರ್ಯಾಗನ್ ಗಿಡವಾಗಿದ್ದರೂ ಬಳ್ಳಿಯಂತೆ ಹಬ್ಬಿ ಹಣ್ಣು ಕೊಡುತ್ತದೆ. ಸಮೃದ್ಧವಾದ ಪೌಷ್ಟಿಕಾಂಶಗಳಿಂದ ಕೂಡಿರುವ ಈ ಹಣ್ಣಿಗೆ ದೇಶ-ವಿದೇಶಗಳಲ್ಲಿ ಎಲ್ಲಿಲ್ಲದ ಬೇಡಿಕೆ. ಕೆಂಪು. ಬಿಳಿ, ಹಳದಿ ಬಣ್ಣದ ಹಣ್ಣುಗಳ ತಳಿಯನ್ನು ಹೊಂದಿದ್ದು ಕೆಂಪು ಡ್ರ್ಯಾಗನ್ ಹಣ್ಣಲ್ಲಿ ಅಧಿಕ ಪೋಷಕಾಂಶಗಳಿವೆ.