ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಹೊನ್ನಾವರ(Honnavar) : ತಾಲೂಕಿನ ಹಳದೀಪುರದ ಕೆರೆಗದ್ದೆ ಮಠದ(Haladipura Keregadde Math) ಆವರಣದಲ್ಲಿ ನಡೆದ ವೈಶ್ಯವಾಣಿ ಸಮಾಜದ(Vaishyavani Math) ಸಭೆಯಲ್ಲಿ ಸ್ವಾಮೀಜಿ ವಿರುದ್ಧ ಕೆಲ ಭಕ್ತರು ಗಂಭೀರ ಆರೋಪಗಳನ್ನು ಮಾಡಿದ್ದು, ಈ ವೇಳೆ ಸಭೆಯಲ್ಲಿ ಗಲಾಟೆ ಹಾಗೂ ಬಡಿದಾಟ ನಡೆದಿರುವ ಘಟನೆ ತಡವಾಗಿ ತಿಳಿದುಬಂದಿದೆ.

ಭಾನುವಾರದಂದು ಆಡಳಿತ ಸಮಿತಿ ಹಾಗೂ ಭಕ್ತರ ನಡುವೆ ನಡೆದ ಸಭೆಯಲ್ಲಿ ಕಾರವಾರದ ಅಜಿತ್ ಪೊಕಳೆ ಎಂಬ  ಭಕ್ತರು, ಮಠದ ಗುರುಗಳಾದ ಶ್ರೀ ವಾಮನಾಶ್ರಮ ಸ್ವಾಮೀಜಿ(Shri Vamanashrama Swamijee) ವಿರುದ್ಧ ಹಣದ ದುರುಪಯೋಗ(Money Missuse) ಸೇರಿದಂತೆ ಹಲವು ಆರೋಪಗಳನ್ನು ಮಾಡಿದರು. ಮಠದ ಲೆಕ್ಕಪತ್ರವನ್ನು ಬಹಿರಂಗಪಡಿಸಬೇಕು ಹಾಗೂ ಸ್ವಾಮೀಜಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.

ಸಭೆಯಲ್ಲಿ ಇದ್ದ ಕೆಲ ಭಕ್ತರು ಅವರ ಮಾತಿಗೆ ಕರತಾಡನದ ಮೂಲಕ ಬೆಂಬಲ ಸೂಚಿಸಿದರೆ, ಮತ್ತೊಂದೆಡೆ ಸ್ವಾಮೀಜಿ ಪರವಾಗಿದ್ದ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಎರಡೂ ಗುಂಪುಗಳ ನಡುವೆ ವಾಗ್ವಾದ ತಾರಕಕ್ಕೇರಿ, ಕೆಲವರ ನಡುವೆ ತಳ್ಳಾಟ–ಕೂಗಾಟ ನಡೆದಿದೆ. ಸಂದರ್ಭದಲ್ಲಿ ಅಜೀತ್ ಪೊಕಳೆ ಮೇಲೆ  ಹಲ್ಲೆಯೂ ನಡೆದು ಅವರನ್ನು ಮಠದ ಆವರಣದಿಂದ ಹೊರಗೆ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಶ್ರೀ ವಾಮನಾಶ್ರಮ ಸ್ವಾಮೀಜಿ ಅಥವಾ ಮಠದ ಆಡಳಿತ ಸಮಿತಿಯಿಂದ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.  ಮಠದ ಈ ಬೆಳವಣಿಗೆ ಮುಂದೆ ಯಾವ ಹಂತಕ್ಕೆ ತಲುಪುತ್ತೋ ಕಾದು ನೋಡಬೇಕಾಗಿದೆ.