ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಕಲ್ಲು ಖಾಲಿ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಲಾರಿ ಹರಿದು ಚಾಲಕರ ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಬೋಗ್ರಿಬೈಲ್‌ನ(Bogaribail)ಲ್ಲಿ ಸಂಭವಿಸಿದೆ.
ಮಾರುತಿ ರಾಮಚಂದ್ರ ನಾಯ್ಕ (50) ಮೃತಪಟ್ಟ ದುರ್ದೈವಿ. ಈತ ಅಂಕೋಲಾ(Ankola) ತಾಲೂಕಿನ ಬೊಗರಿಬೈಲ್ ನಿವಾಸಿ. ರಾಜು ಕಳಸ ಮಾಲೀಕತ್ವದ ಕ್ರಶರ್‌ಗೆ ಎಂದಿನಂತೆ ಕಲ್ಲು ಸಾಗಿಸಿ ಬಂದಿದ್ದ ಮಾರುತಿ, ಲಾರಿಯಿಂದ ಕೆಳಗಿಳಿದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಮಾರುತಿ ಲಾರಿಯನ್ನು ನಿಲ್ಲಿಸಿ ಕಲ್ಲು ಖಾಲಿ ಮಾಡುವ ಸಂದರ್ಭದಲ್ಲಿ ಹ್ಯಾಂಡ್‌ಬ್ರೇಕ್ ಹಾಕದ ಕಾರಣ ಲಾರಿ ಏಕಾಏಕಿ ಚಲಿಸಲು ಆರಂಭಿಸಿದೆ ಎನ್ನಲಾಗಿದೆ. ಅಪಾಯ ಅರಿತ ಮಾರುತಿ ಲಾರಿಯನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದರಾದರೂ, ನಿಯಂತ್ರಣಕ್ಕೆ ಬಾರದ ವಾಹನ ಅವರ ಮೇಲೆಯೇ ಹರಿದು ಪಲ್ಟಿಯಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಅಂಕೋಲಾ ಠಾಣೆ ಪೊಲೀಸ(Ankola station)ರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತ ಮಾರುತಿ ನಾಯ್ಕ ಅವರು ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕುಟುಂಬದ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿದೆ.
