ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿವಮೊಗ್ಗ(Shivamogga) : ಜಿಲ್ಲೆಯ ರಾಮಿನಕೊಪ್ಪದಲ್ಲಿ ಭಾನುವಾರ ಸಂಜೆ ನಡೆದಿದ್ದ ಕಿರಣ್ ಯಾನೆ ಕುಳ್ಳಿ ಕಿರಣ್ ಎಂಬಾತನ ಭೀಕರ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆ ವೇಳೆ, ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ(Firing) ಬಂಧಿಸಿದ್ದಾರೆ. ಕೊಲೆ ಆರೋಪಿ ಉಮೇಶ್ ನಾಯ್ಕ (27) ಎಂಬಾತನೇ ಪೊಲೀಸರ ಗುಂಡೇಟಿಗೆ ಒಳಗಾದ ವ್ಯಕ್ತಿ. ಶಿವಮೊಗ್ಗ-ಎನ್.ಆರ್.ಪುರ ರಸ್ತೆಯ ಲಿಂಗಾಪುರ ಬಳಿ ಸೋಮವಾರ ಮುಂಜಾನೆ ಈ ಎನ್‌ಕೌಂಟರ್ ನಡೆದಿದೆ.
ಘಟನೆಯ ವಿವರ: ಕಿರಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ತುಂಗಾನಗರ(Tunganagar) ಠಾಣೆ ಪೊಲೀಸರು ಜಾಲ ಬೀಸಿದ್ದರು. ಲಿಂಗಾಪುರ(Lingapura) ಬಳಿ ಪ್ರಮುಖ ಆರೋಪಿ ಉಮೇಶ್ ನಾಯ್ಕ್ ಇದ್ದ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಗುರುರಾಜ್ ಕರ್ಕಿ ನೇತೃತ್ವದ ತಂಡ ಬಂಧನಕ್ಕೆ ತೆರಳಿತ್ತು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಉಮೇಶ್, ಪೊಲೀಸ್ ಸಿಬ್ಬಂದಿ ತಮ್ಮಣ್ಣ ಜಂಬಗಿ ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ.ತಕ್ಷಣ ಎಚ್ಚೆತ್ತ ತುಂಗಾನಗರ ಇನ್ಸ್‌ಪೆಕ್ಟರ್ ಗುರುರಾಜ್ ಕರ್ಕಿ ಅವರು ಹಲ್ಲೆ ನಡೆಸದಂತೆ ಆರೋಪಿಗೆ ಎಚ್ಚರಿಕೆ ನೀಡಿ, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆದರೂ ಪೊಲೀಸರ ಎಚ್ಚರಿಕೆಯನ್ನು ಧಿಕ್ಕರಿಸಿ ಮತ್ತೊಮ್ಮೆ ಹಲ್ಲೆಗೆ ಮುಂದಾದಾಗ, ಇನ್ಸ್‌ಪೆಕ್ಟರ್ ಗುರುರಾಜ್ ಅವರು ಆತ್ಮರಕ್ಷಣೆಗಾಗಿ ಆರೋಪಿ ಉಮೇಶ್ ನಾಯ್ಕ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಆಸ್ಪತ್ರೆಗೆ ದಾಖಲು: ಗುಂಡೇಟಿನಿಂದ ಗಾಯಗೊಂಡ ಆರೋಪಿ ಉಮೇಶ್ ನಾಯ್ಕ್‌ನನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ(Shivamogga Meggan Hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇತ್ತ ಆರೋಪಿಯ ಹಲ್ಲೆಯಿಂದ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿ ತಮ್ಮಣ್ಣ ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿನ್ನೆಲೆ:ನಿನ್ನೆ (ಭಾನುವಾರ) ಸಂಜೆ ಶಿವಮೊಗ್ಗದ ರಾಮಿನಕೊಪ್ಪದಲ್ಲಿ(Shivamogga Raminakoppa) 3-4 ಜನ ದುಷ್ಕರ್ಮಿಗಳ ತಂಡ ಕಿರಣ್ ಅಲಿಯಾಸ್ ಕುಳ್ಳಿ ಕಿರಣ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿತ್ತು. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.