ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಶಿರಸಿ(Sirsi) : ತಾಲೂಕಿನ ಬನವಾಸಿ(Banavasi) ಸಮೀಪದ ಸುಗಾವಿ ಗ್ರಾಮದಲ್ಲಿ ದುರಂತವೊಂದು ಸಂಭವಿಸಿದ್ದು, ಕೆರೆಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಸುಗಾವಿ(Sugavi) ಗ್ರಾಮದ ಭಟ್ರಕೆರೆಯಲ್ಲಿ ಈ ಘಟನೆ ನಡೆದಿದ್ದು, ಸುನೀಲ ಅಲಿಯಾಸ್ ಸುಜಯ್ ಕೃಷ್ಣ ಚೆನ್ನಯ್ಯ (17) ಮೃತಪಟ್ಟ ದುರ್ದೈವಿ.
ಮೂವರು ಸ್ನೇಹಿತರು ಮಂಗಳವಾರ ಬೆಳಿಗ್ಗೆ ಗ್ರಾಮದ ಕೆರೆಗೆ ಈಜಲು ತೆರಳಿದ್ದರು. ಇಬ್ಬರು ಸ್ನೇಹಿತರು ಕೆರೆಯ ದಂಡೆಯ ಸಮೀಪವೇ ಇರಲಾಗಿ, ಸುನೀಲ ಕೆರೆಯ ಮಧ್ಯಭಾಗಕ್ಕೆ ಈಜಿಕೊಂಡು ಹೋಗಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ನೀರಿನ ಆಳಕ್ಕೆ ಸಿಲುಕಿ ಆತ ಮುಳುಗಲಾರಂಭಿಸಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ಜತೆಯಲ್ಲಿದ್ದ ಸ್ನೇಹಿತರು ತಕ್ಷಣ ಓಡಿ ಬಂದು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.
ಮೃತದೇಹ ಹೊರಕ್ಕೆ: ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಮಾರಿಕಾಂಬಾ ಲೈಫ್ ಗಾರ್ಡ್(Marikamba Lifeguard) ತಂಡಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಗೋಪಾಲ್ ಗೌಡ ನೇತೃತ್ವದ ಲೈಫ್ ಗಾರ್ಡ್ ತಂಡವು ಕೆರೆಯಲ್ಲಿ ಶೋಧ ಕಾರ್ಯ ನಡೆಸಿ, ಸುಮಾರು 15 ಅಡಿ ಆಳದಲ್ಲಿ ಬಿದ್ದಿದ್ದ ಮೃತದೇಹವನ್ನು ಹೊರತೆಗೆದಿದೆ. ಮಣಿಗರ್ ನಾಗೇಶ್ ಕಬ್ಬೆ, ಪವನ್ ಸಿರ್ಸಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಘಟನಾ ಸ್ಥಳಕ್ಕೆ ಬನವಾಸಿ ಪಿಎಸ್ಐ ಮಹಾಂತೇಶ ಕಂಬಾರ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ(Banavasi Police Station) ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



