ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ(Bhatkal) : ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಗಣೇಶ ಮೂರ್ತಿಯತ್ತ ಕಲ್ಲು ತೂರಾಟ ನಡೆಸಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸಿದ ಆರೋಪದ ಕುರಿತು ಮತ್ತೊಂದು ದೂರು ದಾಖಲಾಗಿದೆ.

ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜು ತಂದೆ ಸಂಕಪ್ಪ ನಾಯ್ಕ (47) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬುಧವಾರ ರಾತ್ರಿ 8.20ರ ಸುಮಾರಿಗೆ ತಲಾಂದ(Taland) ಗಣೇಶೋತ್ಸವ ಮಂಟಪದಿಂದ ಗಣೇಶ ವಿಗ್ರಹವನ್ನು ವಿಸರ್ಜನಾ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಮೆರವಣಿಗೆಯು ಗುಳ್ಮಿ ರೈಲ್ವೆ ಹಳಿ(Gulmi Railway Track) ಮೇಲಿನ ಬ್ರಿಡ್ಜ್ ದಾಟಿ ಮದರಸಾ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ, ರಾತ್ರಿ ಸುಮಾರು 9.30ರ ವೇಳೆಗೆ ರಾಮಚಂದ್ರ ನಾಯ್ಕ ಅವರಿಗೆ ಸೇರಿದ ಕಟ್ಟಡದ ಮೇಲಿನಿಂದ ಹೆಸರು ವಿಳಾಸ ತಿಳಿದುಬಾರದ ಕಿಡಿಗೇಡಿಗಳು ಗಣೇಶ ಮೂರ್ತಿಯತ್ತ ಕಲ್ಲುಗಳನ್ನು ತೂರಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಲ್ಲು ತೂರಾಟದಿಂದ ಮೆರವಣಿಗೆಯಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕಲ್ಲು ತೂರಾಟ ನಡೆಸಿದ ಆರೋಪಿತರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜು ನಾಯ್ಕ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
