ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸುದೀರ್ಘಕಾಲ ಸೇವೆ ಸಲ್ಲಿಸಿ, ನಿವೃತ್ತಿಯ ನಂತರವೂ ವೈದ್ಯಕೀಯ ಸೇವೆ ಹಾಗೂ ಸಮಾಜಸೇವೆಯ ಮೂಲಕ ನೂರಾರು ಬಡವರ ಬದುಕಿಗೆ ಆಸರೆಯಾಗಿದ್ದ ಹಿರಿಯ ವೈದ್ಯ ಡಾ. ಚಂದ್ರಶೇಖರ್ ಕದಂ(Dr Chandrasekhar Kadam) ಅವರು ಸೋಮವಾರ ಮಧ್ಯಾಹ್ನ ಅನಾರೋಗ್ಯದಿಂದ ಮುದ್ದೇನಹಳ್ಳಿಯಲ್ಲಿ (Muddenahalli) ನಿಧನರಾದರು.

ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರ ನಿಧನದಿಂದ ವೈದ್ಯಕೀಯ ಕ್ಷೇತ್ರವು ನಿಸ್ವಾರ್ಥ ಸೇವಾಮನೋಭಾವದ ವೈದ್ಯರೊಬ್ಬರನ್ನು ಕಳೆದುಕೊಂಡಂತಾಗಿದ್ದು, ಅವರನ್ನು ಪ್ರೀತಿಯಿಂದ ಕಾಣುತ್ತಿದ್ದ ಅಪಾರ ಅಭಿಮಾನಿಗಳು ಹಾಗೂ ಹಿತೈಷಿಗಳಲ್ಲಿ ಶೋಕ ಮಡುಗಟ್ಟಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ(Health and Family Welfare Department) ಸುದೀರ್ಘ ಸೇವೆ ಸಲ್ಲಿಸಿದ್ದ ಡಾ. ಸಿ ಎಂ ಕದಂ ಅವರು ನಿವೃತ್ತಿಯ ನಂತರವೂ ವಿಶ್ರಾಂತ ಜೀವನಕ್ಕೆ ಸೀಮಿತವಾಗದೆ, ಸುಮಾರು ಐದು ವರ್ಷಗಳ ಕಾಲ ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಮುದ್ದೇನಹಳ್ಳಿಯ ಮಧುಸೂದನ್ ಸಾಯಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಂಡ್ ರಿಸರ್ಚ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಜೀವನದ ಕೊನೆಯ ಹಂತದವರೆಗೂ ವೈದ್ಯಕೀಯ ವೃತ್ತಿಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಲೇ ಬಂದ ಅವರು, ಸೇವೆಯೇ ಜೀವನ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದರು.

ಕರ್ತವ್ಯ ಮುಗಿದರೂ ಮುಗಿಯದ ಸೇವೆ! : ಡಾ. ಕದಂ ಅವರ ವ್ಯಕ್ತಿತ್ವದ ವಿಶೇಷತೆಯೆಂದರೆ, ವೈದ್ಯಕೀಯ ಸೇವೆಯನ್ನು ಅವರು ಕೇವಲ ಉದ್ಯೋಗವೆಂದು ಪರಿಗಣಿಸಿರಲಿಲ್ಲ. ಬದಲಾಗಿ, ಅದನ್ನು ಮಾನವೀಯ ಕರ್ತವ್ಯವೆಂದು ಭಾವಿಸಿದ್ದರು. ಕಾರವಾರದ ಧೋಬಿ ಘಾಟ್  ರಸ್ತೆಯಲ್ಲಿರುವ ಸಾಯಿ ಮಂದಿರದಲ್ಲಿ ತಮ್ಮ ಕರ್ತವ್ಯದ ಅವಧಿ ಮುಗಿದ ಬಳಿಕವೂ ಬಡ ರೋಗಿಗಳಿಗೆ ಉಚಿತವಾಗಿ ಔಷಧೋಪಚಾರ ಹಾಗೂ ವೈದ್ಯಕೀಯ ನೆರವು ನೀಡುತ್ತಿದ್ದರು. ಹಣದ ಕೊರತೆಯಿಂದ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಬಡ ರೋಗಿಗಳಿಗೆ ತಮ್ಮ ಕೈಯಿಂದಲೇ ಹಣ ಖರ್ಚು ಮಾಡಿ, ಅಗತ್ಯ ಔಷಧಗಳನ್ನು ಕೊಡಿಸಿ ಕಳುಹಿಸುತ್ತಿದ್ದ ಅವರ ಹೃದಯವಂತಿಕೆ ನಿಜಕ್ಕೂ ಅಪರೂಪದ್ದು.

ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ, ಪ್ರಚಾರದ ಹಂಬಲವಿಲ್ಲದೆ, ಸಮಾಜದ ನೋವಿಗೆ ಸ್ಪಂದಿಸುವುದನ್ನೇ ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡಿದ್ದರು. ರೋಗಿಯ ಆರ್ಥಿಕ ಸ್ಥಿತಿಗಿಂತ ಆತನ ಆರೋಗ್ಯಕ್ಕೆ ಆದ್ಯತೆ ನೀಡುತ್ತಿದ್ದ ಅವರು, ವೈದ್ಯಕೀಯ ವೃತ್ತಿಯಲ್ಲಿನ ಮಾನವೀಯ ಮೌಲ್ಯಗಳಿಗೆ ಜೀವಂತ ಉದಾಹರಣೆಯಾಗಿದ್ದರು.

ಆಧ್ಯಾತ್ಮಿಕತೆಯೊಂದಿಗೆ ಬೆಸೆದ ಮಾನವೀಯ ಬದುಕು : ಸತ್ಯಸಾಯಿ ಬಾಬಾ ಹಾಗೂ ಮಾತಾ ಅಮೃತಾನಂದಮಯಿ ಅವರ ಭಕ್ತರಾಗಿದ್ದ ಡಾ. ಕದಂ ಅವರು ಆಧ್ಯಾತ್ಮಿಕ ಚಿಂತನೆ ಮತ್ತು ಮಾನವೀಯ ಸೇವೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಬಡವರು, ಅಸಹಾಯಕರು ಹಾಗೂ ಸಂಕಷ್ಟದಲ್ಲಿದ್ದವರ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಅವರು, ತಮ್ಮ ಬದುಕಿನ ಕೊನೆಯವರೆಗೂ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುದ್ದೇನಹಳ್ಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಮೂರು ಜನ ಸಹೋದರು ಒಬ್ಬ ಸಹೋದರಿ ಹಾಗೂ ಅಪಾರ ಬಂಧು ಬಳಗ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

 ಅವರ ಪಾರ್ಥಿವ ಶರೀರವನ್ನು ಸಂಬಂಧಿಕರು ಕಾರವಾರಕ್ಕೆ ತರಲಿದ್ದು, ನವೆಂಬರ್ 3, ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸದಾಶಿವಗಡದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜನಶಕ್ತಿ ವೇದಿಕೆಯಿಂದ ಸಂತಾಪ : ಡಾ. ಚಂದ್ರಶೇಖರ್ ಕದಂ ಅವರ ನಿಧನಕ್ಕೆ ಶಾಸಕ ಸತೀಶ್ ಸೈಲ್ , ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ಬಿ. ನಾಯಕ ಹಾಗೂ ಸರ್ವ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸತೀಶ್ ಚಂದ್ರ ಬೆಳೂರಕರ, ಆರ್.ಜಿ. ಪ್ರಭು, ಅಶೋಕ್ ಗಾಂವಕರ್ , ಗಿರೀಶ್, ಗಜಾನನ ನಾಯ್ಕ, ಸಂಜಯ ಸರ್ವಣ್ಕರ್, ಪ್ರತಿಮಾ ಸರ್ವಣ್ಕರ್ ಸೇರಿದಂತೆ ಗೋವಾದ ಪಣಜಿಯ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.