ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಗೋಕರ್ಣ(Gokarn) : ಪ್ರವಾಸಕ್ಕೆಂದು ಆಗಮಿಸಿದ್ದ ಬೆಂಗಳೂರಿನ(Banglore) ಖಾಸಗಿ ಕಂಪನಿಯ ಉದ್ಯೋಗಿಗಳ ಪೈಕಿ ಸಮುದ್ರಕ್ಕೆ ಇಳಿದಿದ್ದ ಐವರು ಭಾರಿ ಅಲೆಗಳಿಗೆ ಸಿಲುಕಿ ಕೊಚ್ಚಿಹೋದ ಭೀಕರ ಘಟನೆ ಗೋಕರ್ಣ(Gokarn) ಪೊಲೀಸ್ ಠಾಣಾ ವ್ಯಾಪ್ತಿಯ ದುಬ್ಬನಶಶಿ ಬೀಚ್‌ನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಒಬ್ಬರು ಸಮುದ್ರದಲ್ಲಿ ಕಾಣೆಯಾಗಿದ್ದಾರೆ. ಇಬ್ಬರು ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

​ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ‘ಆಲೋರಿಕಾ ಇಕೋಸ್ಪೇಸ್’ ಕಂಪನಿಯ 16 ಉದ್ಯೋಗಿಗಳ ತಂಡವು ಶನಿವಾರ ಸಂಜೆ ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣಕ್ಕೆ (Famous Tourist Place Gokarn) ಆಗಮಿಸಿ, ದುಬ್ಬನಶಶಿ ಬೀಚ್ ಬಳಿಯ ‘ಕೋಜೆ ರೆಸಾರ್ಟ್’ನಲ್ಲಿ ತಂಗಿತ್ತು. ಭಾನುವಾರ ಬೆಳಿಗ್ಗೆ 7.30ರ ಸುಮಾರಿಗೆ ತಂಡದ ಸದಸ್ಯರು ನೀರಿಗಿಳಿದಿದ್ದಾಗ ಈ ದುರಂತ ಸಂಭವಿಸಿದೆ.

​ಮೀನುಗಾರರು ಹಾಗೂ ಜೀವರಕ್ಷಕರಿಂದ ರಕ್ಷಣೆ:

ಅಲೆಗಳ ಸೆಳೆತಕ್ಕೆ ಐವರು ನೀರು ಪಾಲಾಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯ ಮೀನುಗಾರರು ರಕ್ಷಣೆಗೆ ಧಾವಿಸಿ ನಾಲ್ವರನ್ನು ದಡಕ್ಕೆ ಕರೆತಂದರು. ಅಸ್ವಸ್ಥಗೊಂಡಿದ್ದ ನಾಲ್ವರನ್ನು ತಕ್ಷಣ ಆಂಬುಲೆನ್ಸ್ ಮೂಲಕ ಗೋಕರ್ಣ(Gokarn) ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.

​​ಶೋಭಾ ದಾಸ್ (22): ಜಾರ್ಖಂಡ್‌ನ ಜಮ್‌ಶೆಡ್‌ಪುರ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಇವರು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊನೆಯುಸಿರೆಳೆದಿದ್ದಾರೆ. ​ಮಹಮದ್ ಅಕ್ರಮ್ (ಟೀಮ್ ಲೀಡರ್): ಬೆಂಗಳೂರಿನ ಮುಸ್ಲಿಂ ಕಾಲೋನಿ ನಿವಾಸಿ. ಇವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮುರ್ಡೇಶ್ವರ ಸಮೀಪ ಮೃತಪಟ್ಟಿದ್ದಾರೆ.

​ನಾಪತ್ತೆಯಾದ ಪ್ರವಾಸಿಗ: ಬೆಂಗಳೂರಿನ ಕಲ್ಯಾಣನಗರ ನಿವಾಸಿ ವಿಶ್ವ ಎ.ಕೆ. (24) ಎಂಬುವವರು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

​ಇದೇ ಘಟನೆಯಲ್ಲಿ ಬೆಂಗಳೂರಿನ ನಿಶಾಂತ್ ಡಿ.ವಿ. (26) ಹಾಗೂ ಮಹಮದ್ ಖಾಸಿಂ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

​ಮೃತದೇಹಗಳನ್ನು ಕಾರವಾರ(Karwar) ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ರವಾನಿಸಲಾಗಿದ್ದು, ವಾರಸುದಾರರಿಗೆ ಮಾಹಿತಿ ನೀಡಲಾಗಿದೆ. ಸಂಬಂಧಿಕರು ಆಗಮಿಸಿದ ಬಳಿಕ ದೂರು ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೋಕರ್ಣ ಪೊಲೀಸರು ತಿಳಿಸಿದ್ದಾರೆ