ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ದಾಂಡೇಲಿ(Dandeli) : ತಾಲೂಕಿನ ಬರ್ಚಿ – ಕರ್ಕಾ ರಸ್ತೆಯ(Barchi-Karka Road) ಬೇಡರ ಶಿರಗೂರು ಹತ್ತಿರ ಗುರುವಾರ ರಾತ್ರಿ ನಡೆದ ರೈಲ್ವೆ ಅಂಡರ್ ಬ್ರಿಡ್ಜ್ (RUB) ಕಾಮಗಾರಿ ವೇಳೆ ಆಕಸ್ಮಿಕವಾಗಿ ಮಣ್ಣು ಕುಸಿದು, ರೈಲ್ವೆ ಇಲಾಖೆಯ ತಾಂತ್ರಿಕ ಉದ್ಯೋಗಿಯೊಬ್ಬರು ಸ್ಥಳದಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದು, ಇನ್ನೋರ್ವ ಹಿರಿಯ ಅಧಿಕಾರಿ ಗಾಯಗೊಂಡಿದ್ದಾರೆ.

​ಅಳ್ನಾವರ-ಅಂಬೇವಾಡಿ(Alnavar-Ambewadi) ಸೆಕ್ಷನ್‌ನ ಎಲ್‌ಸಿ ನಂ.11 ರ ಕರ್ಕಾ – ಬರ್ಚಿ ರೈಲ್ವೆ ಮಾರ್ಗದಲ್ಲಿ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕಾಮಗಾರಿಗಾಗಿ ತೆಗೆದುಹಾಕಲಾಗಿದ್ದ ಮಣ್ಣು ತಟ್ಟನೆ ಕುಸಿದು ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯ ಮೇಲೆ ಬಿದ್ದಿದೆ.

ಗದಗ(Gadag) ಜಿಲ್ಲೆಯ ಮುಂಡರಗಿ(Mundaragi) ತಾಲೂಕಿನ ಜಾಲವಾಡಗಿ ಗ್ರಾಮದ ನಿವಾಸಿ, ರೈಲ್ವೆ ತಾಂತ್ರಿಕ ಸಿಬ್ಬಂದಿ ಮಹೇಶ ಶೇಖಪ್ಪ ತಳವಾರ (33) ಮಣ್ಣಿನ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

​ಇದೇ ಘಟನೆಯಲ್ಲಿ ಗದಗ ರಾಜೀವ್ ಗಾಂಧಿನಗರದ ನಿವಾಸಿ, ರೈಲ್ವೆ ಇಲಾಖೆಯ ಹಿರಿಯ ಸೆಕ್ಷನ್ ಅಭಿಯಂತರ ಮಕ್ತುಂ ಹುಸೇನ್ ಮಹಮ್ಮದ್ ಹುಸೇನ್ ಮುಲ್ಲಾ (57) ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

​ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಸಿಪಿಐ ಶಿವಾನಂದ ಅಂಬಿಗೇರ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರೊಂದಿಗೆ ರೈಲ್ವೆ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.