ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar): ಅಲ್ಪಸಂಖ್ಯಾತರಿಗೆ ಕರಾಳವಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ, 2022 ಅನ್ನು ರದ್ದುಪಡಿಸಲು ಆಗ್ರಹಿಸಿ ನವೆಂಬರ್ 12 ರಂದು ಕಾರವಾರದಲ್ಲಿ ಮೌನ ಹಾಗೂ ಶಾಂತಿಯುತ ಮೆರವಣಿಗೆಗೆ ಕರೆ ನೀಡಲಾಗಿದೆ. ಈ ಬಗ್ಗೆ ರಾಜ್ಯಾದ್ಯಂತ ಅಖಿಲ ಕರ್ನಾಟಕ ಕ್ರೈಸ್ತ ಒಕ್ಕೂಟವು ಕರೆ ನೀಡಿದೆ.
ಕರ್ನಾಟಕ ಸರ್ಕಾರವು 2022ರಲ್ಲಿ ಜಾರಿಗೆ ತಂದ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ಅಧಿನಿಯಮವು ಧಾರ್ಮಿಕ ಸ್ವಾತಂತ್ರದ ಮೂಲಭೂತ ಹಕ್ಕುಗಳಿಗೆ (ಸಂವಿಧಾನ ಪರಿಚ್ಚೇಧ 25) ಧಕ್ಕೆ ತರುವುದಲ್ಲದೆ, ಅಲ್ಪಸಂಖ್ಯಾತರ ಮೇಲೆ ಅನಗತ್ಯ ಕಣ್ಣಾವಲು ಇರಿಸಿ ಕಾಯ್ದೆಯ ದುರ್ಬಳಕೆಗೆ ಕಾರಣವಾಗಿ ಈಗಾಗಲೇ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ಎಲ್ಲೆಡೆ ದಾಳಿಗಳು ನಡೆಯುತ್ತಿವೆ. ಶಾಂತಿಪ್ರಿಯ ಕ್ರೈಸ್ತರಿಗೆ ತೀವ್ರವಾದ ಕಿರುಕುಳ ಉಂಟಾಗುತ್ತಿದೆ. ತನ್ಮೂಲಕ ನಮ್ಮ ಧಾರ್ಮಿಕ ಸ್ವತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿರುವುದು ವೇದ್ಯವಾಗಿದೆ ಎಂದು ತಿಳಿಸಿದೆ.
ತತ್ಸಂಬಂಧ ಈಗಾಗಲೇ ಸರ್ಕಾರಕ್ಕೆ ಹಲವಾರು ಸಲ ಮನವಿ ಸಲ್ಲಿಸಿದಾಗಿಯೂ ಅಲ್ಪಸಂಖ್ಯಾತರ ಸಮುದಾಯಕ್ಕೆ ಈ ವರೆಗೆ ನ್ಯಾಯ ದೊರಕದೇ ಇದ್ದುದರಿಂದ ದಿನಾಂಕ 12/11/2026ರ ಗುರುವಾರದಂದು ರಾಜ್ಯಾದ್ಯಂತ ಸರ್ಕಾರದ ಗಮನ ಸೆಳೆಯಲು ತೆಗೆದುಕೊಂಡ ಕಾರ್ಯಕ್ರಮದ ಹಿನ್ನಲೆಯಲ್ಲಿ ಮೌನ ಮೆರವಣಿಗೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಮೆರವಣಿಗೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರ್ಯವ್ಯಾಪ್ತಿಯಲ್ಲಿರುವ ವಿವಿಧ ಕ್ರೈಸ್ತ ಸಮುದಾಯದವರು ಸೇರಿ ಸುಮಾರು 3000 ಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದ್ದು ಈ ಕಾರ್ಯಕ್ರಮಕ್ಕೆ ಅಲ್ಪ ಸಂಖ್ಯಾತರ ಸಮುದಾಯದ ಸರ್ವರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಖಿಲ ಕರ್ನಾಟಕ ಕ್ರೈಸ್ತ ಒಕ್ಕೂಟವು ಈ ಮೂಲಕ ವಿನಂತಿಸಿದೆ.
ಅಂದು ಬೆಳಿಗ್ಗೆ 11 ಗಂಟೆಯಿಂದ ನಗರದ ಮಿತ್ರ ಸಮಾಜ ಮೈದಾನದಿಂದ ಮೌನ ಮೆರವಣಿಗೆ ಆರಂಭವಾಗಿ ಸುಭಾಷ್ ಸರ್ಕಲ್, ಸವಿತಾ ಸರ್ಕಲ್, ಡಾ. ಕಮಲಾಕಾರ ರಸ್ತೆ, ಅಂಬೇಡ್ಕರ್ ಸರ್ಕಲ್, ಪತ್ರಿಕಾಭವನ, ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಮನವಿ ಪತ್ರ ಸಲ್ಲಿಸುವದರೊಂದಿಗೆ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಲಿದೆ. ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಸಹಕರಿಸಬೇಕೆಂದು ಫಾದರ್ ಎಲ್ವಿನ್ ಪಾಲ್ ಡಿಸೋಜಾ ತಿಳಿಸಿದ್ದಾರೆ.






