ಭಟ್ಕಳ : ಇತಿಹಾಸ ಪ್ರಸಿದ್ದ ಭಟ್ಕಳ ತಾಲೂಕಿನ ನಾಗರಿಕರ ಆರಾಧ್ಯ ದೈವ ಶ್ರೀ ಮಾರಿ ಜಾತ್ರೆಗೆ ದಿನಾಂಕ ನಿಗದಿಯಾಗಿದೆ.

ಜುಲೈ 31 ಮತ್ತು ಆಗಸ್ಟ್ 1ರಂದು ಅದ್ದೂರಿಯಿಂದ ಜಾತ್ರೆ ನಡೆಸಲು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ. ಜಾತ್ರೆಗೆ ಒಂದು ವಾರದ ಮೊದಲು ವಿವಿಧ ಪದ್ಧತಿ ಅನುಸರಿಸಿ ಜಾತ್ರಾ ಮೂರ್ತಿಯನ್ನ ಮಣಕುಳಿಯ ಆಚಾರಿ ಮನೆಯಲ್ಲಿ  ಸಿದ್ದಪಡಿಸಲಾಗುತ್ತದೆ.

ಜುಲೈ 30ರಂದು ಮಂಗಳವಾರದಂದು ರಾತ್ರಿ ಮಾರಿ ದೇವಿ ಮೂರ್ತಿಯ ತಯಾರಕ ವಿಶ್ವಕರ್ಮ ಸಮಾಜದವರಿಂದ ವಿಶೇಷ ಪೂಜೆಯ ಬಳಿಕ ನಂತರ ಮಾರಿ ದೇವಿಯ ಮೂರ್ತಿಯನ್ನು ಬುಧವಾರ 31ರಂದು ಮುಂಜಾನೆ ಮೆರವಣಿಗೆಯ ಮೂಲಕ ಗದ್ದುಗೆ ತರಲಾಗುತ್ತದೆ. ಬಳಿಕ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುತ್ತದೆ.

ಗ್ರಾಮೀಣ ಭಾಗದ ಜನರು ತಮ್ಮ ಕಷ್ಟಗಳಿಗೆ ಮಾರಿ ದೇವಿಯಲ್ಲಿ ಪ್ರಾರ್ಥಿಸುತ್ತಾರೆ. ಕಣ್ಣು ಬೇನೆ, ಜಾನುವಾರುಗಳಿಗೂ ಕೂಡ ರೋಗ ಬಾಧೆ ಬಾರದಂತೆ ರಕ್ಷಿಸು ಎಂದು ದೇವಿಯಲ್ಲಿ ಬೇಡಿಕೊಳ್ಳುತ್ತಾರೆ. ಜಾತ್ರಾ ಸಂದರ್ಭದಲ್ಲಿ ದೇವಿಗೆ ಕಣ್ಣು ಕಾಣಿಕೆಯ ಮೂಲಕ ಹರಕೆ ಸಲ್ಲಿಸುತ್ತಾರೆ.